
ದೆಹಲಿ, ಜನವರಿ 25: ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜೈವಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಸ್ಟಾರ್ಟ್ ಅಪ್ಗಳು (Startup) ಆರಂಭವಾಗಿವೆ. ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಹೊರಹೊಮ್ಮುತ್ತಿದೆ. ಹೀಗಾಗಿ ನಾವು ತಯಾರಿಸುವ ಪ್ರತಿಯೊಂದು ಉತ್ಪನ್ನದ ಗುಣಮಟ್ಟ ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುವಂತೆ ಸ್ಟಾರ್ಟ್‌ಅಪ್ ಆರಂಭಿಸಲು ಮುಂದಾಗುವ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.
ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದ 130ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದ ಹಲವು ಕ್ಷೇತ್ರಗಳಲ್ಲಿ ಇಂದು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಅಣುಶಕ್ತಿ, ಸೆಮಿಕಂಡಕ್ಟರ್‌ಗಳು, ಮೊಬೈಲಿಟಿ, ಹಸಿರು ಹೈಡ್ರೋಜನ್ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಇದನ್ನೂ ಓದಿ: ದೇಶದ ಮತದಾರರಿಗೆ ಪ್ರಧಾನಿ ಮೋದಿ ಪತ್ರ: ಮತದಾರರಾಗುವ ಕ್ಷಣವನ್ನ ಸಂಭ್ರಮಿಸುವಂತೆ ಯುವಜನತೆಗೆ ಕರೆ
ನಾವು ತಯಾರಿಸುವ ಪ್ರತಿಯೊಂದು ಉತ್ಪನ್ನದ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಬೇಕು. ಅದು ವಸ್ತ್ರೋದ್ಯಮವಾಗಲಿ, ತಂತ್ರಜ್ಞಾನವಾಗಲಿ, ಎಲೆಕ್ಟ್ರಾನಿಕ್ಸ್ ಅಥವಾ ಪ್ಯಾಕೇಜಿಂಗ್ ಆಗಲಿ, ಭಾರತೀಯ ಉತ್ಪನ್ನ ಎಂದರೆ ‘ಅತ್ಯುತ್ತಮ ಗುಣಮಟ್ಟ’ ಎಂಬ ಅರ್ಥ ಮೂಡಿಬರಬೇಕು. ಶ್ರೇಷ್ಠತೆಯನ್ನೇ ನಮ್ಮ ಮಾನದಂಡವಾಗಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನು ದೇಶದ ಜನತೆಗೆ ಗಣರಾಜ್ಯೋತ್ಸವ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿದರು. ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಮೊದಲ ಬಾರಿ ಮತದಾನಕ್ಕೆ ಅರ್ಹರಾಗುವ ಯುವಜನರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ, ಯುವ ನಾಗರಿಕರು ಮತದಾರರಾಗುವ ಕ್ಷಣವನ್ನು ಸಮುದಾಯಗಳಲ್ಲಿ ಸಂಭ್ರಮಿಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರ ಗುಡ್ ನ್ಯೂಸ್: ವೇತನ ಪರಿಷ್ಕರಣೆಗೆ ಅಸ್ತು
ಹುಟ್ಟುಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಂತೆ, ಯುವಕ ಅಥವಾ ಯುವತಿ ಮೊದಲ ಬಾರಿ ಮತದಾರರಾಗುವ ಸಂದರ್ಭದಲ್ಲೂ ಸಂಪೂರ್ಣ ನೆರೆಹೊರೆಯವರು, ಗ್ರಾಮ ಅಥವಾ ನಗರ ಒಂದಾಗಿ ಅವರನ್ನು ಅಭಿನಂದಿಸಿ ಸಿಹಿ ಹಂಚಬೇಕು. ಇದರಿಂದ ಮತದಾನದ ಬಗ್ಗೆ ಜಾಗೃತಿ ಹೆಚ್ಚುವುದರ ಜೊತೆಗೆ, ಮತದಾರರ ಮಹತ್ವ ಮತ್ತಷ್ಟು ಬಲವಾಗುತ್ತದೆ ಎಂದರು.
ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ನಿವಾಸಿ ಬೆನೋಯ್ ದಾಸ್ ಅವರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅವರು ತಮ್ಮ ಸ್ವಂತ ಶ್ರಮದಿಂದಲೇ ಜಿಲ್ಲೆಯನ್ನು ಹಸಿರುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೆನೋಯ್ ದಾಸ್ ಸಾವಿರಾರು ಮರಗಳನ್ನು ನೆಟ್ಟು, ಸಸಿಗಳನ್ನು ಖರೀದಿಸುವುದು, ನೆಡುವುದು ಹಾಗೂ ಅವುಗಳ ಆರೈಕೆ ಮಾಡುವ ಸಂಪೂರ್ಣ ವೆಚ್ಚವನ್ನೇ ಅನೇಕ ಬಾರಿ ಸ್ವತಃ ಭರಿಸಿದ್ದಾರೆ. ಅಗತ್ಯವಿದ್ದಾಗ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ನಗರಾಡಳಿತ ಸಂಸ್ಥೆಗಳ ಸಹಕಾರವನ್ನೂ ಅವರು ಪಡೆದುಕೊಂಡಿದ್ದಾರೆ. ಅವರ ಪ್ರಯತ್ನಗಳ ಫಲವಾಗಿ ಜಿಲ್ಲೆಯಲ್ಲಿ ರಸ್ತೆಬದಿಗಳ ಹಸಿರಾವಳಿ ಮತ್ತಷ್ಟು ಸುಂದರವಾಗಿ ಬೆಳೆದು ನಿಂತಿದೆ ಎಂದರು.
ಭಾರತ ಮತ್ತು ಮಲೇಶಿಯಾ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ‘ಮಲೇಶಿಯಾ ಇಂಡಿಯಾ ಹೆರಿಟೇಜ್ ಸೊಸೈಟಿ’ ಮಹತ್ವದ ಪಾತ್ರ ವಹಿಸುತ್ತಿದೆ. ಕಳೆದ ತಿಂಗಳು ಮಲೇಶಿಯಾದಲ್ಲಿ ಆಯೋಜಿಸಲಾಗಿದ್ದ ‘ಲಾಲ್ ಪಾಡ್ ಸೀರೆ’ ಐಕಾನಿಕ್ ವಾಕ್ ವಿಶೇಷ ಗಮನ ಸೆಳೆದಿದೆ. ಬಂಗಾಳದ ಸಂಸ್ಕೃತಿಯೊಂದಿಗೆ ಆಪ್ತ ಸಂಬಂಧ ಹೊಂದಿರುವ ಈ ಸೀರೆ ಧರಿಸಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದ ಈ ಕಾರ್ಯಕ್ರಮ, ಒಂದೇ ರೀತಿಯ ಸೀರೆ ಧರಿಸಿದ ಅತ್ಯಧಿಕ ಜನಸಂಖ್ಯೆಯ ದಾಖಲೆಯನ್ನು ನಿರ್ಮಿಸಿದೆ. ಈ ಸಾಧನೆಯನ್ನು ಮಲೇಶಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sun, 25 January 26