Mann Ki Baat: 92ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

PM Narendra Modi: ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಜನರು ಪ್ರಧಾನಿಗೆ ಮಾಹಿತಿ ಕಳಿಸಿಕೊಡುತ್ತಾರೆ. ಆಯ್ದ ಕೆಲವನ್ನು ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ.

Mann Ki Baat: 92ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 28, 2022 | 9:52 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಆಗಸ್ಟ್ 28) ಬೆಳಿಗ್ಗೆ 11 ಗಂಟೆಗೆ ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಮನ್​ ಕಿ ಬಾತ್ ಕಾರ್ಯಕ್ರಮದ 92ನೇ ಆವೃತ್ತಿಯಾಗಿದೆ. ಕಾರ್ಯಕ್ರಮವು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಕೇಂದ್ರಗಳಿಂದ ಏಕಕಾಲಕ್ಕೆ ಮರು ಪ್ರಸಾರಗೊಳ್ಳಲಿದೆ. ಆಕಾಶವಾಣಿಯ ನ್ಯೂಸ್ ವೆಬ್​ಸೈಟ್​ ಮತ್ತು ನ್ಯೂಸ್​ ಆನ್ ಏರ್ ಮೊಬೈಲ್ ಆ್ಯಪ್​ಗಳಲ್ಲಿಯೂ ಈ ಭಾಷಣವನ್ನು ಲೈವ್ ಆಗಿ ಕೇಳಬಹುದು. ಆಕಾಶವಾಣಿ, ದೂರದರ್ಶನ ಮತ್ತು ಪ್ರಧಾನಿ ಕಚೇರಿಯ ಯುಟ್ಯೂಬ್​ ಚಾನೆಲ್​ಗಳ ಮೂಲಕವೂ ಭಾಷಣವನ್ನು ಆಲಿಸಬಹುದಾಗಿದೆ. ಹಿಂದಿ ಭಾಷಣದ ಲೈವ್ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿಯೂ ಭಾಷಣ ಮರು ಪ್ರಸಾರವಾಗಲಿದೆ.

‘ಮನ್​ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಸಾಕಷ್ಟು ಜನರು ಪ್ರಧಾನಿಗೆ ಪ್ರತಿ ತಿಂಗಳೂ ಮಾಹಿತಿ ಕಳಿಸಿಕೊಡುತ್ತಾರೆ. ಕಳೆದ ತಿಂಗಳ (ಜುಲೈ) ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಆಜಾದಿ ಕಾ ಅಮೃತ್ ಮಹೋತ್ಸವ’ದ ಸಂಭ್ರಮವನ್ನು ಪ್ರಸ್ತಾಪಿಸಿದ್ದರು. ಹಲವು ಸ್ವಾತಂತ್ರ್ಯ ಯೋಧರನ್ನು ನೆನಪಿಸಿಕೊಂಡರು. ಕೆಲ ರೈಲು ನಿಲ್ದಾಣಗಳಲ್ಲಿ ಅಳವಡಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಅರಿಯಬೇಕೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೋರಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ’ ಸರಣಿಯ ಪುಸ್ತಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆಗಸ್ಟ್​ ತಿಂಗಳ ಮನ್​ ಕಿ ಬಾತ್​ ಬಗ್ಗೆಯೂ ಸುಳಿವೊಂದನ್ನು ನೀಡುವ ಮೂಲಕ ಕುತೂಹಲ ಬೆಳೆಸಿದ್ದರು. ‘ಇಂದು ನಾವು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತಿನೊಂದಿಗೆ ಇಂದಿನ ಮನ್​ ಕಿ ಬಾತ್ ಆರಂಭಿಸಿದ್ದೆವು. ಮನ್​ ಕಿ ಬಾತ್​ನ ಮುಂದಿನ ಕಾರ್ಯಕ್ರಮದಲ್ಲಿ ಮುಂದಿನ 25 ವರ್ಷ ಹೇಗಿರಬೇಕು ಎನ್ನುವ ಬಗ್ಗೆ ಚಿಂತನೆ ನಡೆಸೋಣ. ನೀವು ಅಷ್ಟೇ, ನಿಮ್ಮ ಮನೆಗಳಲ್ಲಿ ಹೇಗೆ ಸ್ವಾತಂತ್ರ್ಯ ದಿನ ಆಚರಿಸಿದಿರಿ ಎನ್ನುವ ಬಗ್ಗೆ ನನ್ನೊಂದಿಗೆ ಮಾಹಿತಿ ಹಂಚಿಕೊಳ್ಳಿ’ ಎಂದು ಹೇಳುವ ಮೂಲಕ ನರೇಂದ್ರ ಮೋದಿ ‘ಮನ್ ಕಿ ಬಾತ್‘ ಮಾತು ಮುಗಿಸಿದ್ದರು.

ಪ್ರತಿ ತಿಂಗಳ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್ ಕಾರ್ಯಕ್ರಮದ ಮೊದಲ ಭಾಷಣವು ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ದೇಶದ ಜನರಿಗೆ ಆಡಳಿತದ ಬಗ್ಗೆ ಮಾಹಿತಿ ಕೊಡುವುದು, ವಿವಿಧ ವಿಷಯಗಳ ಬಗ್ಗೆ ಪ್ರಧಾನಿಯು ತಮ್ಮ ದೃಷ್ಟಿಕೋನ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮೋದಿಗೆ ಮನ್​ ಕಿ ಬಾತ್ ವಿಚಾರ ಹೊಳೆದದ್ದು 1998ರಲ್ಲಿ

ಮೋದಿ ಅವರು ಪ್ರಧಾನಿ ಅಲ್ಲ, ಗುಜರಾತಿನ ಮುಖ್ಯಮಂತ್ರಿಗಳಾಗುವ ಮೊದಲೇ ರೇಡಿಯೋ ಮೂಲಕ ದೇಶದ ಎಲ್ಲಾ ಮೂಲೆಗಳ ಜನರನ್ನು ತಲುಪಬಹುದೆಂಬ ಮನವರಿಕೆಯಾಗಿತ್ತು. ಅದು 1998ರ ಸಮಯ ಮತ್ತು ಮೋದಿಯವರು ಬಿಜೆಪಿಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಸಂಘಟನಾ ಕೆಲಸಗಳಲ್ಲಿ ತೊಡಗಿದ್ದರು. ಅದೊಂದು ದಿನ ಅವರು ರಾಜ್ಯದ ಕುಗ್ರಾಮದಂಥ ಪ್ರದೇಶದಲ್ಲಿ ಕೆಲಸ ಮಾಡುವಾಗ ಟೀ ಕುಡಿಯಲು ಅವರು ಒಂದು ಚಿಕ್ಕ ಧಾಬಾಗೆ ಹೋಗಿದ್ದರು. ಖುಷಿಯಿಂದ ಬೀಗುತ್ತಿದ್ದ ಧಾಬಾದ ಮಾಲೀಕ ಮೋದಿಯವರ ಮುಂದೆ ಚಹಾದ ಬದಲು ಲಾಡು ತಂದಿಟ್ಟ. ಮೋದಿಯವರು, ‘ಭಯ್ಯಾ, ನಾನು ಕೇಳಿದ್ದು ಚಾಯ್, ಲಡ್ಡು ಅಲ್ಲ,’ ಎಂದರು. ಅದಕ್ಕೆ ಧಾಬಾದವನು, ‘ಭಯ್ಯಾ, ನೀವದನ್ನು ಅದನ್ನು ತಿನ್ನಲೇಬೇಕು, ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಲ್ಲಿ ತೇಲುತ್ತಿದೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾರೆ, ಬಂದ ಗ್ರಾಹಕರಿಗೆಲ್ಲ ನಾನು ಲಡ್ಡು ಹಂಚುತ್ತಿದ್ದೇನೆ,’ ಎಂದು ಹೇಳಿದ.

‘ಅಂಥದ್ದೇನಾಗಿದೆ,’ ಅಂತ ಮೋದಿಯವರು ಕೇಳಿದಾಗ ಅವನು, ‘ನಿಮಗೆ ಗೊತ್ತಿಲ್ವಾ? ಭಾರತ ಇಂದು ಅಣ್ವಸ್ತ್ರ ಪರೀಕ್ಷೆ ನಡೆಸಿದೆ,’ ಎಂದು ಹೇಳಿದ. ಮೋದಿಯವರು, ‘ನಿಮಗೆ ಹೇಗೆ ಗೊತ್ತಾಯಿತು ಭಯ್ಯಾ?’ ಅಂತ ಕೇಳಿದಾಗ, ಅವನು ರೇಡಿಯೋವನ್ನು ಅವರ ಮುಂದೆ ತಂದಿಟ್ಟ. ಆಗಿನ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಪೋಖ್ರಾನ್​ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸುದ್ದಿಯ ಬಾನುಲಿ ಪ್ರಸಾರ ಜಾರಿಯಲ್ಲಿತ್ತು. ಅಂದು ಮೋದಿ ಅವರಿಗೆ ರೇಡಿಯೋದ ಶಕ್ತಿ ಮನವರಿಕೆಯಾಯಿತು. ಮುಂದೆ ಪ್ರಧಾನಿಯಾದ ನಂತರ ಅವರು ಮನ್ ಕಿ ಬಾತ್ ಮೂಲಕ ದೇಶದ ಜನರನ್ನು ತಲುಪುವ ಮಾರ್ಗವನ್ನು ರೂಪಿಸಿದರು.

ಅಂಥ ರಿಮೋಟ್ ಜಾಗದಲ್ಲಿದ್ದ ವ್ಯಕ್ತಿಗೆ ದೇಶದಲ್ಲಿ ಏನು ನಡೆಯುತ್ತಿದೆ ಅನ್ನೋದು ರೇಡಿಯೊ ಮೂಲಕ ಗೊತ್ತಾಗಿದೆ. ರೇಡಿಯೊವನ್ನು ದೇಶದಲ್ಲಿ ಯಾವ ಮೂಲೆಯಲ್ಲೂ ಆಲಿಸಬಹುದು, ಇದಕ್ಕಿಂತ ಪವರ್ ಫುಲ್ ಮಾಧ್ಯಮ ಮತ್ತೊಂದಿಲ್ಲ ಅಂತ ಮೋದಿಯವರಿಗೆ ಅವತ್ತು ಮನದಟ್ಟಾಯಿತು. ಆಗಲೇ ಜನರನ್ನು ತಲುಪಲು ರೇಡಿಯೊವನ್ನು ಬಳಸುವ ನಿರ್ಧಾರ ಅವರಲ್ಲಿ ರೂಪ ತಳೆಯಲಾರಂಭಿಸಿತ್ತು. 2014ರಲ್ಲಿ ಅವರು ಪ್ರಧಾನ ಮಂತ್ರಿಯಾದಾಗ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಅಸ್ತಿತ್ವಕ್ಕೆ ಬಂತು. ಅಗಲೇ ಹೇಳಿದ ಹಾಗೆ ಮೊದಲ ಕಂತು ಅಕ್ಟೋಬರ್ 3, 2014 ವಿಜಯದಶಮಿ ದಿನದಂದು ಪ್ರಸಾರವಾಯಿತು.

ಮನ್​ ಕಿ ಬಾತ್​ಗೆ ನೀವು ಮಾಹಿತಿ ಕಳಿಸಿ

ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಹಲವು ಬಾರಿ ಕನ್ನಡಿಗರನ್ನೂ ಉಲ್ಲೇಖಿಸಿದ್ದಾರೆ. ಶೌಚಾಲಯಕ್ಕಾಗಿ ಉಪವಾಸ ಧರಣಿ ನಡೆಸಿದ ರಾಯಚೂರು ಜಿಲ್ಲೆ ಗಂಗಾವತಿ ತಾಲ್ಲೂಕಿನ ಮಲ್ಲಮ್ಮ ಹೆಸರಿನ ವಿದ್ಯಾರ್ಥಿನಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಶ್ರೀರಂಗಪಟ್ಟಣದ ವೀರಭದ್ರ ದೇವಸ್ಥಾನ ಹಾಗೂ ದಂಪತಿಗಳಾದ ಅನುದೀಪ್ ಹಾಗೂ ಮಿನೀಷಾ ನಡೆಸುತ್ತಿರುವ ಕಾರ್ಯವನ್ನು ಪ್ರಧಾನಿಗಳು ಹೊಗಳಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಐಡಿಯಾಗಳನ್ನು ಕಳಿಸುವ ಇಚ್ಛೆ ನಿಮಗಿದ್ದರೆ MyGov, NaMo ಌಪ್ ಬಳಸಬಹುದು ಇಲ್ಲವೇ 1800-11-7800 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು. ಪ್ಯಾಕ್ಸ್ ಕಳುಹಿಸುವ ಹಾಗಿದ್ದರೆ, +91-11-23019545, 23016857 ನಂಬರ್ ಗಳಿಗೆ ಕಳಿಸಬಹುದು. ನಿಮ್ಮ ಪ್ರಶ್ನೆಗೆ ಫ್ಯಾಕ್ಸ್ ಇಲ್ಲವೇ ಯಾವುದಾದರೂ ಮಾಧ್ಯಮದ ಮೂಲಕ ಉತ್ತರ ಸಿಗುತ್ತದೆ.

Published On - 9:21 am, Sun, 28 August 22

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ