ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು: ಡ್ರಗ್ ಡೀಲರ್ ಬಂಧನ, ಈವರೆಗೆ ಬಂಧಿತರಾಗಿದ್ದು 5 ಮಂದಿ
Sonali Phogat ಫೋಗಾಟ್ ಸಾವಿನ ಹಿಂದಿನ ರಾತ್ರಿ ಪಾರ್ಟಿ ಮಾಡುತ್ತಿದ್ದ ರೆಸ್ಟೋರೆಂಟ್‌ನ ಮಾಲೀಕ ಮತ್ತು ಡ್ರಗ್ಸ್ ವ್ಯಾಪಾರಿಯನ್ನು ಶನಿವಾರ ಬಂಧಿಸಲಾಗಿದೆ
ಪಣಜಿ: ಗೋವಾದಲ್ಲಿ (Goa) ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ 5 ಮಂದಿಯ್ನ ಬಂಧಿಸಲಾಗಿದೆ. ಫೋಗಟ್ ಅವರ ಸಹಚರರಿಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪ ಹೊತ್ತಿರುವ ಮತ್ತೊಬ್ಬ ಡೀಲರ್‌ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪದ ಮೇಲೆ ಡ್ರಗ್ ಡೀಲರ್ ಅನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಫೋಗಾಟ್ ಸಾವಿನ ಹಿಂದಿನ ರಾತ್ರಿ ಪಾರ್ಟಿ ಮಾಡುತ್ತಿದ್ದ ರೆಸ್ಟೋರೆಂಟ್‌ನ ಮಾಲೀಕ ಮತ್ತು ಡ್ರಗ್ಸ್ ವ್ಯಾಪಾರಿಯನ್ನು ಶನಿವಾರ ಬಂಧಿಸಲಾಗಿದೆ. ಗುರುವಾರ ಬಂಧಿಸಲಾದ ಹರ್ಯಾಣ ಬಿಜೆಪಿ ನಾಯಕಿಯ ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರನ್ನು 10 ದಿನಗಳ ಕಾಲ ಪೊಲೀಸ್ ವಶದಲ್ಲಿರಿಸಲಾಗಿದೆ. ಸಿಂಗ್ ಮತ್ತು ಸಗ್ವಾನ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಅದೇ ವೇಳೆ ರೆಸ್ಟೋರೆಂಟ್ ಮಾಲೀಕರು ಮತ್ತು ಡ್ರಗ್ ಡೀಲರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ರೆಸ್ಟೋರೆಂಟ್‌ನ ಸಿಬ್ಬಂದಿ, ಫೋಗಟ್ ತಂಗಿದ್ದ ರೆಸಾರ್ಟ್, ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿದ ಆಸ್ಪತ್ರೆ ಮತ್ತು ಆಕೆಯ ವಾಹನ ಚಾಲಕ ಸೇರಿದಂತೆ ಪೊಲೀಸರು ಇದುವರೆಗೆ 25 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ.
ಸೋಮವಾರದಂದು ಅಂಜುನಾ ಬೀಚ್‌ನಲ್ಲಿರುವ ಪ್ರಸಿದ್ಧ ರೆಸ್ಟೊರೆಂಟ್-ಕಮ್-ನೈಟ್‌ಕ್ಲಬ್ ಕರ್ಲಿಯಲ್ಲಿ ಆರೋಪಿಗಳು ಫೋಗಟ್‌ಗೆ ಮೆಥಾಂಫೆಟಮೈನ್ ಡ್ರಗ್ಸ್ (meth) ಕುಡಿಯಲು ಒತ್ತಾಯಿಸಿದ್ದಾರೆ ಎಂದು ಸೆಕ್ಯುರಿಟಿ ಕ್ಯಾಮೆರಾದ ದೃಶ್ಯಗಳಿಂದ ಮತ್ತು ತಪ್ಪೊಪ್ಪಿಗೆಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಆಕೆ ಆನಂತರ ಅಸ್ವಸ್ಥಳಾಗಿದ್ದು, ಅದನ್ನು ಕುಡಿದ ನಂತರ ಆಕೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಮೇಲೆ ಆಕೆಯ ಜತೆಗಿದ್ದವರು ಆಕೆಯನ್ನು ಗ್ರ್ಯಾಂಡ್ ಲಿಯೋನಿ ಎಂಬ ಹೋಟೆಲ್‌ಗೆ ಕರೆದೊಯ್ದರು. ಮರುದಿನ ಆಕೆಯನ್ನು ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಫೋಗಟ್ ಅವರ ಸಾವನ್ನು ಆರಂಭದಲ್ಲಿ ಹೃದಯಾಘಾತ ಎಂದು ಪರಿಗಣಿಸಲಾಗಿದ್ದರೂ, ಆಕೆಯ ಕುಟುಂಬವು ಸಂಪೂರ್ಣ ತನಿಖೆ ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಮಧ್ಯಸ್ಥಿಕೆಗೆ ಒತ್ತಾಯಿಸಿದ ನಂತರ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಕೋರಿ ಗೋವಾಕ್ಕೆ ಪತ್ರ ಬರೆಯುವುದಾಗಿ ಹರ್ಯಾಣ ಸರ್ಕಾರ ಹೇಳಿದೆ. ಚಂಡೀಗಢದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಫೋಗಟ್ ಕುಟುಂಬ ಭೇಟಿ ಮಾಡಿದ ನಂತರ ಈ ಘೋಷಣೆ ಮಾಡಲಾಗಿದೆ.