ವಿವಾಹಿತ ಮಹಿಳೆಗೆ ಮದುವೆಯ ಭರವಸೆ ನೀಡಿ ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದ್ದರೆ ಅದು ಅತ್ಯಾಚಾರ ಅಲ್ಲ: ಕೇರಳ ಹೈಕೋರ್ಟ್
ಅವಳು ವಿವಾಹಿತ ಮಹಿಳೆಯಾಗಿದ್ದು, ಅರ್ಜಿದಾರರೊಂದಿಗೆ ಕಾನೂನುಬದ್ಧ ವಿವಾಹ ಸಾಧ್ಯವಿಲ್ಲ ಎಂದು ಆಕೆಗೆ ತಿಳಿದಿತ್ತು. ಆರೋಪಿಯು ವಿವಾಹಿತ ಮಹಿಳೆಗೆ ತಾನು ಮದುವೆಯಾಗುವುದಾಗಿ ನೀಡಿದ ಭರವಸೆ ಕಾನೂನಿನಲ್ಲಿ ಜಾರಿಯಾಗುವುದಿಲ್ಲ
ಕೇರಳ ಹೈಕೋರ್ಟ್ (Kerala High Court) ಇತ್ತೀಚೆಗೆ 25 ವರ್ಷದ ಯುವಕನ ವಿರುದ್ಧದ ಅತ್ಯಾಚಾರ(Rape Case) ಪ್ರಕರಣವನ್ನು ರದ್ದುಗೊಳಿಸುವಾಗ ಈಗಾಗಲೇ ವಿವಾಹಿತೆಯಾಗಿರುವ ಮಹಿಳೆಯನ್ನು ಮದುವೆಯಾಗುವುದಾಗಿ ಪುರುಷ ಭರವಸೆ ನೀಡಿ ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದ್ದರೆ ಅದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ಆಗುವುದಿಲ್ಲ ಎಂದಿದೆ. ಕೊಲ್ಲಂನ ಪುನಲೂರು ನಿವಾಸಿ 25 ವರ್ಷದ ಟಿನೋ ತಂಗಚ್ಚನ್ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 417 (ವಂಚನೆ) ಮತ್ತು 493 (ಲೈಂಗಿಕತೆಗೆ ಮೋಸದ ಪ್ರಚೋದನೆ) ಅಡಿಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ನವೆಂಬರ್ 22 ರಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ಪೀಠವು ರದ್ದುಗೊಳಿಸಿತು.ತಂಗಚ್ಚನ್ ಮದುವೆಯ ಸುಳ್ಳು ಭರವಸೆ ನೀಡಿದ ನಂತರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾದ ಮಹಿಳೆಗೆ ಮದುವೆಯಾಗಿದ್ದು ಆಕೆ ಪತಿಯಿಂದ ಬೇರ್ಪಟ್ಟಿದ್ದಾರೆ. ಆಕೆಯ ಮೇಲೆ ತಂಗಚ್ಚನ್ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ.ಸಂತ್ರಸ್ತೆ ತನ್ನ ಪ್ರೇಮಿಯೊಂದಿಗೆ ಸ್ವ ಇಚ್ಛೆಯಿಂದ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
“ಅವಳು ವಿವಾಹಿತ ಮಹಿಳೆಯಾಗಿದ್ದು, ಅರ್ಜಿದಾರರೊಂದಿಗೆ ಕಾನೂನುಬದ್ಧ ವಿವಾಹ ಸಾಧ್ಯವಿಲ್ಲ ಎಂದು ಆಕೆಗೆ ತಿಳಿದಿತ್ತು. ಆರೋಪಿಯು ವಿವಾಹಿತ ಮಹಿಳೆಗೆ ತಾನು ಮದುವೆಯಾಗುವುದಾಗಿ ನೀಡಿದ ಭರವಸೆ ಕಾನೂನಿನಲ್ಲಿ ಜಾರಿಯಾಗುವುದಿಲ್ಲ. ಅಂತಹ ಜಾರಿಗೊಳಿಸಲಾಗದ ಮತ್ತು ಕಾನೂನುಬಾಹಿರ ಭರವಸೆಯು ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಆಧಾರವಾಗುವುದಿಲ್ಲ. ಇಲ್ಲಿ, ಮದುವೆಯಾಗುವ ಭರವಸೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಏಕೆಂದರೆ ಸಂತ್ರಸ್ತೆ ವಿವಾಹಿತ ಮಹಿಳೆ ಮತ್ತು ಕಾನೂನಿನ ಅಡಿಯಲ್ಲಿ ಅರ್ಜಿದಾರರೊಂದಿಗೆ ಕಾನೂನುಬದ್ಧ ವಿವಾಹ ಸಾಧ್ಯವಿಲ್ಲ ಎಂದು ಅವಳು ತಿಳಿದಿದ್ದಳು. ಆದ್ದರಿಂದ, ಐಪಿಸಿಯ ಸೆಕ್ಷನ್ 376 ಇದಕ್ಕೆ ಅನ್ವಯವಾಗುವುದಿಲ್ಲ. ಐಪಿಸಿಯ ಸೆಕ್ಷನ್ 417 ಮತ್ತು 493 ರ ವಿಧಿಸಲು ದಾಖಲೆಯಲ್ಲಿ ಏನೂ ಇಲ್ಲ. ವಂಚನೆಯ ಅಪರಾಧಕ್ಕೆ ಯಾವುದೇ ಪುರಾವೆ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಲೈಂಗಿಕ ಸಂಭೋಗವು ಸಹಮತದ ಸ್ವರೂಪದ್ದಾಗಿದೆ ಎಂಬುದು ಮೊದಲ ಮಾಹಿತಿ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರು ನೀಡಿದ ವಿವಾಹದ ಭರವಸೆಯಿಂದ ಮಹಿಳೆ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದ್ದಾಳೆ. ಪುರುಷನು ಮಹಿಳೆಯನ್ನು ಮದುವೆಯಾಗುವ ತನ್ನ ವಾಗ್ದಾನವನ್ನು ಹಿಂತೆಗೆದುಕೊಂಡರೆ, ಅವರು ಮಾಡಿದ ಸಮ್ಮತಿಯ ಲೈಂಗಿಕತೆಯನ್ನು IPC ಯ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಅಂತಹ ಲೈಂಗಿಕ ಕ್ರಿಯೆಗೆ ಅವರು ಸುಳ್ಳು ಭರವಸೆ ನೀಡುವ ಮೂಲಕ ಒಪ್ಪಿಗೆಯನ್ನು ಪಡೆದಿದ್ದಾರೆ. ಮದುವೆಯಾಗುವ ಯಾವುದೇ ಉದ್ದೇಶವಿಲ್ಲದೆ ಆತ ಸುಳ್ಳು ಭರವಸೆ ನೀಡಿದ್ದ ಎಂದು ಆದೇಶದಲ್ಲಿ ಹೇಳಿದೆ.
ಆರೋಪಿ ಮತ್ತು ಸಂತ್ರಸ್ತೆ ಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಮೂಲಕ ಭೇಟಿಯಾದರು. ಅವರ ನಡುವಿನ ಸಂಬಂಧವು ಪ್ರೇಮವಾಗಿ ಬೆಳೆದು ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ, ಮದುವೆ ನಡೆಯಲಿಲ್ಲ. ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಮಹಿಳೆಯ ಪ್ರಕಾರ, ಅರ್ಜಿದಾರರು ತನ್ನನ್ನು ಮದುವೆಯಾಗುವುದಾಗಿ ನೀಡಿದ ಭರವಸೆ ನೀಡಿದ್ದರಿಂದ ಲೈಂಗಿಕ ಸಂಪರ್ಕಕ್ಕೆ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.