ವಿಶ್ವಸಂಸ್ಥೆ ಮಹಾಧಿವೇಶನ: ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್ ಭಾಗಿ

50ಕ್ಕೂ ಹೆಚ್ಚು ಅಧಿಕೃತ ಕಾರ್ಯಕ್ರಮಗಳನ್ನು ಒಳಗೊಂಡ ಬಿಡುವಿರದ ಚಟುವಟಿಕೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರು ಒಂದು ವಾರ ಕಳೆಯಲಿದ್ದಾರೆ.

ವಿಶ್ವಸಂಸ್ಥೆ ಮಹಾಧಿವೇಶನ: ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್ ಭಾಗಿ
ಎಸ್ ಜೈಶಂಕರ್, ವಿದೇಶಾಂಗ ಸಚಿವ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 20, 2022 | 8:05 AM

ನ್ಯೂಯಾರ್ಕ್: ವಿಶ್ವಸಂಸ್ಥೆಯ 77ನೇ ಮಹಾಧಿವೇಶನವು ಇಂದಿನಿಂದ (ಸೆ 20) (UN General Assembly – UNGA) ಆರಂಭವಾಗಲಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್​.ಜೈಶಂಕರ್​ ನ್ಯೂಯಾರ್ಕ್​ಗೆ ಬಂದಿದ್ದಾರೆ. ನಗರದಲ್ಲಿ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಾಂಬೋಜ್ ಸ್ವಾಗತಿಸಿದರು. ದ್ವಿಪಕ್ಷೀಯ, ಬಹುಪಕ್ಷೀಯ ಸಭೆಗಳೂ ಸೇರಿದಂತೆ 50ಕ್ಕೂ ಹೆಚ್ಚು ಅಧಿಕೃತ ಕಾರ್ಯಕ್ರಮಗಳನ್ನು ಒಳಗೊಂಡ ಬಿಡುವಿರದ ಚಟುವಟಿಕೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರು ಒಂದು ವಾರ ಕಳೆಯಲಿದ್ದಾರೆ.

‘ವಿಶ್ವಸಂಸ್ಥೆ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ಈ ಬಿಡುವಿಲ್ಲದ ವಾರದಲ್ಲಿ ಅವರು ಹಲವು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ರುಚಿರಾ ಕಾಂಬೋಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಭಯೋತ್ಪಾದನೆ ನಿಗ್ರಹ, ಶಾಂತಿಪಾಲನೆ, ಸುಧಾರಿತ ಬಹುಪಕ್ಷೀಯ ಸಂಬಂಧಗಳ ನಿರ್ವಹಣೆ, ಹವಾಮಾನ ಬದಲಾವಣೆಯ ಅಪಾಯಗಳಿಗೆ ಕಡಿವಾಣ ಮತ್ತು ಕೋವಿಡ್ -19 ಲಸಿಕೆಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಲಿದೆ.

ಸೆ 24 ರಂದು ಮಹಾಧಿವೇಶನದ ವೇದಿಕೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಜೈಶಂಕರ್ ಮಾತನಾಡಲಿದ್ದಾರೆ. ನಂತರ 50ಕ್ಕೂ ಹೆಚ್ಚು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಬೇನಿಯಾ, ಮಾಲ್ಟಾ, ಈಜಿಪ್ಟ್ ಮತ್ತು ಇಂಡೋನೇಷ್ಯಾದ ವಿದೇಶಾಂಗ ಸಚಿವರು ಮಹಾಧಿವೇಶನದ ಕ್ಸಾಬಾ ಕೊರೋಸಿ ಸೇರಿದಂತೆ ಹಲವರನ್ನು ಅವರು ಭೇಟಿಯಾಗಲಿದ್ದಾರೆ. ಫ್ರಾನ್ಸ್-ಭಾರತ-ಯುಎಇ ದೇಶಗಳ ತ್ರಿಪಕ್ಷೀಯ ಒಕ್ಕೂಟಕ್ಕೆ ನಾಮಕರಣವನ್ನೂ ಮಾಡಲಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯು ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುವ ಐದು ಪರಿಕಲ್ಪನೆಗಳಾದ ಸಮ್ಮಾನ್, ಸಂವಾದ್, ಸಹಯೋಗ, ಶಾಂತಿ ಮತ್ತು ಸಮೃದ್ಧಿ ಭಾರತದ ಕಾರ್ಯನಿರ್ವಹಣೆಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 18 ರಿಂದ 28 ರವರೆಗೆ ಜೈಶಂಕರ್ ಅಮೆರಿಕದಲ್ಲಿ ಇರುತ್ತಾರೆ. ನ್ಯೂಯಾರ್ಕ್​ನಲ್ಲಿದ್ದಾಗ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಲಿದ್ದಾರೆ.

ವಿವಿಧ ದೇಶಗಳೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ದೃಷ್ಟಿಯಿಂದ ಜೈಶಂಕರ್ ಅವರು ಜಿ 4 (ಭಾರತ, ಬ್ರೆಜಿಲ್, ಜಪಾನ್, ಜರ್ಮನಿ) ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಬಹುಪಕ್ಷೀಯ ಸಂಬಂಧಗಳ ಪುನರುಜ್ಜೀವನ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆ’ ಕುರಿತು ಚರ್ಚಿಸಲೆಂದು ಎಲ್ 69 ಗುಂಪಿನ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿದೆ. ಇದರಲ್ಲಿಯೂ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಸಚಿವರು ಸ್ಮರಿಸಲಿದ್ದಾರೆ. ಸೆ 24 ರಂದು ‘India@75’ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಸಹಭಾಗಿತ್ವದ ಕುರಿತು ಮಾತನಾಡಲಿದ್ದಾರೆ. ಈ ವೇಳೆ ಭಾರತದ ಅಭಿವೃದ್ಧಿ ಕಥನ, ಇತರ ದೇಶಗಳಿಗೆ ಭಾರತವು ನೀಡಿದ ಸಹಕಾರದ ಬಗ್ಗೆ ಅವರು ಮಾತನಾಡಲಿದ್ದಾರೆ.

ನ್ಯೂಯಾರ್ಕ್​ನಿಂದ ಅಮೆರಿಕದ ರಾಜಧಾನಿ ವಾಷಿಂಗ್​ಟನ್​ಗೆ ತೆರಳಲಿರುವ ಅವರು, ಅಲ್ಲಿಯೂ ಹಲವು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ-ಅಮೆರಿಕದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅವರು ಮಾತುಕತೆಗಳ ಮೂಲಕ ಪ್ರಯತ್ನಿಸಲಿದ್ದಾರೆ.

Published On - 8:05 am, Tue, 20 September 22