ದೆಹಲಿ: ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತಂತೆ ಮೈಕ್ರೊಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಸೋಮವಾರ ವಿಷಾದ ವ್ಯಕ್ತಪಡಿಸಿದ್ದಾರೆ. ಕೊವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರ್ಭಟದಿಂದ ನಾನು ಎದೆಗುಂದಿದ್ದೇನೆ. ಕೊವಿಡ್ ನಿಯಂತ್ರಣ ಕಾರ್ಯಗಳಿಗೆ ಸಹಾಯ ಮಾಡಲು ಮತ್ತು ಆಮ್ಲಜನಕ ಸಾಧನಗಳ ಖರೀದಿ ಮಾಡಲು ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
‘ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ನೋಡಿ ನಾನು ಎದೆಗುಂದಿದ್ದೇನೆ. ಅಮೆರಿಕಾ ಸರ್ಕಾರ ಸಹಾಯ ಮಾಡುವುದಕ್ಕೆ ಮುಂದಾಗಿರುವುದಕ್ಕೆ ನಾನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕೊವಿಡ್ ನಿಯಂತ್ರಣಕ್ಕೆ ನೆರವಾಗಲು ಮೈಕ್ರೋಸಾಫ್ಟ್ ತಂತ್ರಜ್ಞಾನ ಬಳಸುವುದನ್ನು ಮುಂದುವರೆಸುತ್ತದೆ ಮತ್ತು ಆಮ್ಲಜನಕ ಸಾಧನಗಳ ಖರೀದಿಗೆ ಬೆಂಬಲಿಸುತ್ತದೆ’ ಎಂದು ಸತ್ಯ ನಾಡೆಲ್ಲಾ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
I am heartbroken by the current situation in India. I’m grateful the U.S. government is mobilizing to help. Microsoft will continue to use its voice, resources, and technology to aid relief efforts, and support the purchase of critical oxygen concentration devices.
— Satya Nadella (@satyanadella) April 26, 2021
ಕೊವಿಡ್ ಎರಡನೇ ಅಲೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಉಂಟಾಗುತ್ತಿದೆ. ಜೀವ ಉಳಿಸಲು ಮುಖ್ಯವಾಗಿ ಬೇಕಾದ ಆಮ್ಲಜನಕದ ಕೊರತೆ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ಭಾರತದಲ್ಲಿ 22.5 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಸಾವಿನ ಪ್ರಮಾಣ ಶೇ.89ರಷ್ಟು ಹೆಚ್ಚಾಗಿದೆ.
ದೇಶದ ವಿವಿಧ ಭಾಗಗಳಲ್ಲಿನ ಅಮ್ಲಜನಕದ ಕೊರತೆಯಿಂದಾಗಿ ಕೈಗಾರಿಕಾ ಉತ್ಪಾದನೆಗಳಿಗೆ ಆಮ್ಲಜನಕವನ್ನು ಆಮದು ಮಾಡಿಕೊಳ್ಳಲು ಮತ್ತು ಆಮ್ಲಜನಕ ವ್ಯವಸ್ಥೆ ಬೇಕಾದ ಸ್ಥಳಗಳಿಗೆ ವರ್ಗಾಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಯುನೈಟೆಡ್ ಸ್ಟೇಟ್ ಭಾನುವಾರ ನ್ಯೂಯಾರ್ಕ್ನಿಂದ ಭಾರತಕ್ಕೆ 300 ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಟ್ಟಿದೆ.
ಇದನ್ನೂ ಓದಿ: ವಾನರ ಸೇನೆಗೆ ಕೊರೊನಾ ಕಂಟಕ; ನಗರ ಪ್ರದೇಶಕ್ಕೆ ಲಗ್ಗೆ ಇಡುವ ಮಂಗಗಳ ಬಗ್ಗೆ ಗಮನಹರಿಸಲು ಚಿತ್ರದುರ್ಗ ಜನರ ಆಗ್ರಹ