ಕೊಲೆ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಕಾಂಗ್ರೆಸ್ ನಾಯಕನಿಗೆ ಹಾಲಿನ ಅಭಿಷೇಕ

| Updated By: ಸುಷ್ಮಾ ಚಕ್ರೆ

Updated on: Aug 25, 2022 | 3:39 PM

ಚುನಾವಣೆಯ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಚಂದುರಾವ್ ಶಿಂಧೆ ಅವರನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ರಾಜು ಭಡೋರಿಯಾ ಅವರನ್ನು ಈ ವರ್ಷ ಜುಲೈ 13ರಂದು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿತ್ತು.

ಕೊಲೆ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಕಾಂಗ್ರೆಸ್ ನಾಯಕನಿಗೆ ಹಾಲಿನ ಅಭಿಷೇಕ
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಕಾಂಗ್ರೆಸ್ ನಾಯಕನಿಗೆ ಹಾಲಿನ ಅಭಿಷೇಕ
Follow us on

ಇಂದೋರ್: ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ಆರೋಪ ಹೊತ್ತು ಜೈಲು ಸೇರಿದ್ದ ಮಧ್ಯಪ್ರದೇಶದ (Madhya Pradesh) ಕಾಂಗ್ರೆಸ್ (Congress) ಕಾರ್ಪೊರೇಟರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆ ಕಾರ್ಪೋರೇಟರ್​​ಗೆ ಅವರ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ, ಡ್ರಮ್ ಬಾರಿಸಿ ಸ್ವಾಗತಿಸಿರುವ ವಿಡಿಯೋ ವೈರಲ್ ಆಗಿದೆ.

ಇಂದೋರ್ ಕಾಂಗ್ರೆಸ್ ಕಾರ್ಪೊರೇಟರ್ ರಾಜು ಭಡೋರಿಯಾ ಅವರಿಗೆ ನೀಡಿದ ಸ್ವಾಗತದ ಕೆಲವು ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ಕೊಲೆ ಪ್ರಕರಣದ ಆರೋಪಿಯನ್ನು ವೈಭವೀಕರಿಸುತ್ತಿದೆ ಎಂದು ಆಡಳಿತಾರೂಢ ಬಿಜೆಪಿ ಟೀಕಿಸಿದೆ.

ಜುಲೈ 6ರಂದು ಇಂದೋರ್ ಚುನಾವಣೆಯ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಚಂದುರಾವ್ ಶಿಂಧೆ ಅವರನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ರಾಜು ಭಡೋರಿಯಾ ಅವರನ್ನು ಈ ವರ್ಷ ಜುಲೈ 13ರಂದು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿತ್ತು. ರಾಜು ಭಡೋರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಅಸಭ್ಯ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಕ್ಕೆ ಬಾಲಕಿಗೆ ಚಾಕು ಇರಿದು ಕೊಲೆ; ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಬುಧವಾರ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ರಾಜು ಭಡೋರಿಯಾ ಜೈಲಿನಿಂದ ಹೊರಬಂದ ನಂತರ, ಅವರ ಬೆಂಬಲಿಗರು ಸಂಗೀತ ಮತ್ತು ಡೋಲು ಬಡಿತಗಳೊಂದಿಗೆ ಮೆರವಣಿಗೆ ನಡೆಸಿ, ಭಡೋರಿಯಾ ಮೇಲೆ ಹಾಲಿನ ಅಭಿಷೇಕ ಮಾಡಿದ್ದಾರೆ. ಇದನ್ನು ಬಿಜೆಪಿ ಟೀಕಿಸಿದೆ.

ಮಧ್ಯಪ್ರದೇಶದ ಬಿಜೆಪಿ ವಕ್ತಾರ ಉಮೇಶ್ ಶರ್ಮಾ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತ್ತು ಗಂಭೀರ ಪ್ರಕರಣದ ಆರೋಪಿಯನ್ನು ವೈಭವೀಕರಿಸುವ ಮೂಲಕ ಕಾಂಗ್ರೆಸ್ ರಾಜಕೀಯವನ್ನು ಅಪರಾಧೀಕರಣಕ್ಕೆ ಒಳಪಡಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.

ಆದರೆ, ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ನೀಲಭ್ ಶುಕ್ಲಾ ಅವರು ಬಿಜೆಪಿಯ ಆದೇಶದ ಮೇರೆಗೆ ರಾಜು ಭಡೋರಿಯಾ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಶಿಂಧೆ ಮೇಲಿನ ದಾಳಿಯ ಸಂದರ್ಭದಲ್ಲಿ ರಾಜು ಭಡೋರಿಯಾ ಆ ಸ್ಥಳದಲ್ಲಿಯೇ ಇರಲಿಲ್ಲ ಎಂದು ಶುಕ್ಲಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ