ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ ಸಾಧ್ಯತೆ; ಆ. 28ಕ್ಕೆ ಅಂತಿಮ ನಿರ್ಧಾರ
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯು ಆಗಸ್ಟ್ 21ರಂದು ನಡೆಯಬೇಕಿತ್ತು. ಸೆಪ್ಟೆಂಬರ್ 20ರೊಳಗೆ ಪಕ್ಷದ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ.
ನವದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷರ ಆಯ್ಕೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಆಗಸ್ಟ್ 28ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ವರ್ಚುವಲ್ ಸಭೆಯ ಬಳಿಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ನಿಖರವಾದ ವೇಳಾಪಟ್ಟಿಯನ್ನು ಅನುಮೋದಿಸಲು ಸಿಡಬ್ಲುಸಿ ಭಾನುವಾರ ಸಭೆ ನಡೆಸಲಿದೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯು ಆಗಸ್ಟ್ 21ರಂದು ನಡೆಯಬೇಕಿತ್ತು. ಸೆಪ್ಟೆಂಬರ್ 20ರೊಳಗೆ ಪಕ್ಷದ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಈ ಆಯ್ಕೆಯ ವೇಳಾಪಟ್ಟಿಯನ್ನು ಕೆಲವು ವಾರಗಳವರೆಗೆ ಮುಂದೂಡುವ ಸಾಧ್ಯತೆಯಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಡಬ್ಲ್ಯೂಸಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸಭೆಗೆ ಆಗಮಿಸಲಿದ್ದಾರೆ. ಸೋನಿಯಾ ಗಾಂಧಿ ಈ ನಡುವೆ ತಮ್ಮ ಚಿಕಿತ್ಸೆಗಾಗಿ ಮಕ್ಕಳೊಂದಿಗೆ ವಿದೇಶಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ: Breaking News ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ
ರಾಹುಲ್ ಗಾಂಧಿಯನ್ನು ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವಂತೆ ಹಲವು ನಾಯಕರು ಕರೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಕುತೂಹಲ ಇನ್ನೂ ಮುಂದುವರಿದಿದೆ.
2019ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸತತ 2ನೇ ಬಾರಿ ಸೋಲನ್ನು ಅನುಭವಿಸಿದ ನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ ಅವರ ವಿರುದ್ಧ ಪಕ್ಷದಲ್ಲಿ ಹಲವು ನಾಯಕರು ಬಂಡಾಯವೆದ್ದ ನಂತರ 2020ರ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ಕೊನೆಗೆ ಅವರು ಹಂಗಾಮಿ ಅಧ್ಯಕ್ಷರಾಗಿಯೇ ಮುಂದುವರೆದರು.