ದೆಹಲಿ: ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ರಾಜ್ಯ ಜಾಗತಿಕ ಬಂಡವಾಳ ಹೂಡಿಕೆ ಕಾರ್ಯಕ್ರಮ ಆಯೋಜನೆ ಸಂಬಂಧ ನವದೆಹಲಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಶತಾಯಗತಾಯ ಕರ್ನಾಟಕವನ್ನು ಕೈಗಾರಿಕಾ ವಲಯದಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲೇಬೇಕೆಂದು ಪಣ ತೊಟ್ಟಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿವಿಧ ದೇಶದ ರಾಯಭಾರಿಗಳನ್ನು ಭೇಟಿ ಮಾಡಿ ಆಹ್ವಾನ ನೀಡಿದರು.
ಸೋಮವಾರ ನವದೆಹಲಿಯಲ್ಲಿರುವ ವಿವಿಧ ದೇಶಗಳ ರಾಯಭಾರಿಗಳನ್ನು ಖುದ್ದು ಭೇಟಿ ಮಾಡಿದ ನಿರಾಣಿಯವರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಜರ್ಮನ್ ರಾಯಭಾರಿ ಕಚೇರಿಗೆ ಭೇಟಿ ಕೊಟ್ಟ ನಿರಾಣಿಯವರು ಜರ್ಮನಿಯ ಫೆಡೆರಲ್ ರಿಪಬ್ಲಿಕ್ ಆಂಡ್ ಮಿಷನ್ ಡೆಪ್ಯುಟಿ ಚೀಫ್ ಡಾ.ಸ್ಟೀಫನ್ ಗ್ರಾಬರ್, ನಂತರ ಕೊರಿಯಾದ ರಾಯಭಾರಿ ಚಾಂಗ್ ಜೆ-ಬೋಕ್, ಜಪಾನ್ ದೇಶದ ಡೆಪ್ಯುಟಿ ಚೀಫ್ ಕುಹಿನಿಕೊ ಕವಾಜು, ಬ್ರಿಟಿಷ್ ಡೆಪ್ಯುಟಿ ಟ್ರೇಡ್ ಕಮಿಷನರ್ ರೈಯಾನನ್ ಹ್ಯಾರಿಸ್, ಭಾರತದ ಬ್ರಿಟಿಷ್ ಹೈ ಕಮಿಷನ್ನ ಅರ್ಥಶಾಸ್ತ್ರ ಮತ್ತು ಹಣಕಾಸು ಮುಖ್ಯಸ್ಥ ಆಡಮ್ ಟೇಲರ್, ಕೇಂದ್ರ ಸರ್ಕಾರದ ರಾಷ್ಟ್ರೀಯ ಹೂಡಿಕೆ ಉತ್ತೇಜನ ಸಂಸ್ಥೆಯಾದ ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ದೀಪಕ್ ಬಾಗ್ಲ ಸೇರಿದಂತೆ ಮತ್ತಿತರ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಿ, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ಕೊಟ್ಟಿದ್ದಾರೆ.
ಬಳಿಕ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ನಿರಾಣಿ ಅವರು, ಕರ್ನಾಟಕ ಇಂದು ದೇಶದಲ್ಲೇ ಅತ್ಯಂತ ಪ್ರಗತಿಪರ ರಾಜ್ಯವಾಗಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು, ಐಟಿಬಿಟಿ, ರಕ್ಷಣಾ, ವೈಮಾನಿಕ, ಕೃಷಿ, ಸ್ಟಾರ್ಟ್ ಅಪ್, ಯೂನಿಕಾರ್ನ್, ಗಣಿ, ಆರೋಗ್ಯಘಿ, ಆಹಾರ ಮತ್ತು ಸಂಸ್ಕರಣಾ ಘಟಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದರು. ಸಿಲಿಕಾನ್ ವ್ಯಾಲಿ ಎಂದೇ ಕರೆಯುವ ಬೆಂಗಳೂರನ್ನು ನಾಲ್ಡೆಜ್ ಹಬ್ ಎಂದೇ ಪ್ರಸಿದ್ದಿಯಾಗಿದೆ. ವಿಶ್ವದ ಸುಪ್ರಸಿದ್ದ ಕೈಗಾರಿಕೆಗಳು ಇಲ್ಲಿ ಸ್ಥಾಪಿತವಾಗಿದೆ. ಕೈಗಾರಿಕಾ ಸ್ನೇಹಿ ಸರ್ಕಾರ ನಮ್ಮದಾಗಿದ್ದು, ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಕುತ್ತೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ 2020-25ರ ಕೈಗಾರಿಕಾ ನೀತಿ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದಾಗಿ ನಾನಾ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬರುವ ಉದ್ಯಮಿಗಳಿಗೆ ಇಲಾಖೆಯು ಅಗತ್ಯವಿರುವ ಭೂಮಿ, ನೀರು, ರಸ್ತೆ ಸೇರಿದಂತೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಇದಕ್ಕೆ ನಮ್ಮ ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿಗಳೇ ಕಾರಣ ಎಂದರು.
ಬೆಂಗಳೂರು ಮಾತ್ರವಲ್ಲದೆ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿಘಿ, ಧಾರವಾಡ, ಕಲಬುರಗಿ ಅದೇ ರೀತಿ 3ನೇ ಹಂತದ ನಗರಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಸೇರಿದಂತೆ ಎಲ್ಲಾ ಕಡೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಿಗೆ ಇರುತ್ತದೆ ಎಂದು ಉದ್ಯಮಿಗಳಿಗೆ
ಆಶ್ವಾಸನೆ ನೀಡಿದರು.
ಈ ಹಿಂದೆ ನಮ್ಮ ಸರ್ಕಾರ ಎರಡು ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನಡೆಸಿತ್ತುಘಿ. ಪರಿಣಾಮ ರಾಜ್ಯದ ಎಲ್ಲೆಡೆ ಇಂದು ಅನೇಕ ಕೈಗಾರಿಕೆಗಳು ತಲೆ ಎತ್ತಿ ನಿಂತಿವೆ. ನ.2ರಿಂದ 4ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ದಿಮೆ ಆರಂಭಿಸುವವರಿಗೆ 50 ಸಾವಿರ ಎಕರೆ ಜಮೀನನ್ನು ಭೂಸ್ವಾಧೀನ ಪಡೆಸಿಕೊಂಡಿದ್ದೇವೆ. ಮುಕ್ತ ಮನಸ್ಸಿನಿಂದ ಬಂಡವಾಳ ಹೂಡುವಂತೆ ಮನವಿ ಮಾಡಿದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ರಮಣ ರೆಡ್ಡಿ, ಆಯುಕ್ತರಾದ ಗುಂಜನ್ ಕೃಷ್ಣ, ಮತ್ತಿತರರು ಹಾಜರಿದ್ದರು.
Published On - 6:39 pm, Mon, 9 May 22