ಕಾಲೀಘಾಟ್​​ ದೇವಾಲಯದಲ್ಲಿ ಯಜ್ಞ  ಮಾಡಿದ ನಂತರ ತಲೆಕೂದಲು ಬೋಳಿಸಿ ಬಿಜೆಪಿ ತೊರೆದ ತ್ರಿಪುರಾ ಶಾಸಕ

| Updated By: ರಶ್ಮಿ ಕಲ್ಲಕಟ್ಟ

Updated on: Oct 06, 2021 | 1:21 PM

Ashis Das: "ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ನಾನು ಇಂದು ತಲೆ ತಗ್ಗಿಸಿದ್ದೇನೆ. ನಾನು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ ಮತ್ತು ನನ್ನ ಮುಂದಿನ ಹೆಜ್ಜೆಯನ್ನು ಕಾಲವೇ ನಿರ್ಧರಿಸಲಿದೆ ಎಂದಿದ್ದಾರೆ ಆಶಿಸ್ ದಾಸ್.

ಕಾಲೀಘಾಟ್​​ ದೇವಾಲಯದಲ್ಲಿ ಯಜ್ಞ  ಮಾಡಿದ ನಂತರ ತಲೆಕೂದಲು ಬೋಳಿಸಿ ಬಿಜೆಪಿ ತೊರೆದ ತ್ರಿಪುರಾ ಶಾಸಕ
ಆಶಿಸ್ ದಾಸ್
Follow us on

ಗುವಾಹಟಿ: ಬಹುಕಾಲದ ಬಿಜೆಪಿ ನಾಯಕ ಮತ್ತು ತ್ರಿಪುರಾದ ಸುರ್ಮಾ ಕ್ಷೇತ್ರದ ಶಾಸಕರಾದ ಆಶಿಸ್ ದಾಸ್ (Ashis Das) ಮಂಗಳವಾರ ಬಿಜೆಪಿ ನೇತೃತ್ವದ ಸರ್ಕಾರದ “ದುಷ್ಕೃತ್ಯಗಳಿಗಾಗಿ ತಪಸ್ಸು” ಎಂದು ತಲೆಕೂದಲು ಬೋಳಿಸಿದ್ದಾರೆ. ಕೋಲ್ಕತ್ತಾದ ಪ್ರಸಿದ್ಧ ಕಾಲೀಘಾಟ್​​ ದೇವಸ್ಥಾನದಲ್ಲಿ ದಾಸ್ ಯಜ್ಞವನ್ನೂ ಮಾಡಿದ್ದಾರೆ. ದೇವಸ್ಥಾನ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಮನೆಯಿಂದ ಸ್ವಲ್ಪ ದೂರದಲ್ಲಿದೆ. ತ್ರಿಪುರಾದಲ್ಲಿ ಬಿಜೆಪಿ “ರಾಜಕೀಯ ಅರಾಜಕತೆ ಮತ್ತು ಅವ್ಯವಸ್ಥೆ” ಯನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ ದಾಸ್ ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ಜನರು ಅತೃಪ್ತರಾಗಿದ್ದಾರೆ, ಆದ್ದರಿಂದ ಬಿಜೆಪಿ ತೊರೆಯಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಅವರು ಈ ಹಿಂದೆ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದು, ಮಮತಾ ಪ್ರಧಾನಿಯಾಗಬೇಕು ಎಂದಿದ್ದರು. ಕಳೆದ ಎರಡು ವರ್ಷಗಳಿಂದ, ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ ಪ್ರಬಲ ವಿಮರ್ಶಕರಾಗಿದ್ದಾರೆ ದಾಸ್. ದಾಸ್ ಅವರು ಶೀಘ್ರವೇ ತೃಣಮೂಲಕ್ಕೆ ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ತ್ರಿಪುರಾದಲ್ಲಿ 2023 ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

“ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ನಾನು ಇಂದು ತಲೆ ತಗ್ಗಿಸಿದ್ದೇನೆ. ನಾನು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ ಮತ್ತು ನನ್ನ ಮುಂದಿನ ಹೆಜ್ಜೆಯನ್ನು ಕಾಲವೇ ನಿರ್ಧರಿಸಲಿದೆ. ಆದರೆ ಬಿಜೆಪಿ ನೇತೃತ್ವದ ಆಡಳಿತದಲ್ಲಿ ತ್ರಿಪುರಾ ಅರಾಜಕತೆ ಮತ್ತು ದುರಾಡಳಿತವಿದೆ. ಆದ್ದರಿಂದ ಕಳೆದ ಎರಡು ವರ್ಷಗಳಿಂದ, ನಾನು ಈ ಎಲ್ಲಾ ತಪ್ಪು ಕೆಲಸಗಳ ವಿಮರ್ಶಕನಾಗಿದ್ದೇನೆ. ನಾನು ಪಕ್ಷ ಮತ್ತು ರಾಜಕೀಯವನ್ನು ಮೀರಿ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ “ಎಂದು ಆಶಿಸ್ ದಾಸ್ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಏತನ್ಮಧ್ಯೆ, ತ್ರಿಪುರಾ ಬಿಜೆಪಿ ದಾಸ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿವೆ.  ಕೋಲ್ಕತ್ತಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಉತ್ತರ ತ್ರಿಪುರಾದ ಸುರ್ಮಾ ವಿಧಾನಸಭಾ ಕ್ಷೇತ್ರದ ಶಾಸಕರಾದ ದಾಸ್, ಪ್ರಧಾನಿ ನರೇಂದ್ರ ಮೋದಿಯವರನ್ನು “ಹೆಚ್ಚಿನ ಸರ್ಕಾರಿ ಆಸ್ತಿಗಳನ್ನು ಖಾಸಗಿ ಪಕ್ಷಗಳಿಗೆ ಮಾರಿದ್ದಾರೆ” ಎಂದು ಟೀಕಿಸಿದರು.

ಒಮ್ಮೆ ಮೋದಿಯವರ ಸಂದೇಶಗಳು ದೇಶದಾದ್ಯಂತ ಎಲ್ಲಾ ವರ್ಗದ ಜನರ ಮನಸ್ಸನ್ನು ಕಲಕಿತು ಮತ್ತು ಮುಟ್ಟಿತು. ಮೋದಿ ಒಮ್ಮೆ ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಎಂದು ಹೇಳಿದ್ದರು. ಆದರೆ ಈಗ, ಇದು ದೇಶದಲ್ಲಿ ಜನಪ್ರಿಯ ಜುಮ್ಲಾ ಆಗಿ ಮಾರ್ಪಟ್ಟಿದೆ ಎಂದಿದ್ದಾರೆ ದಾಸ್.

ಈ ಹಿಂದೆ ಭಬಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಬ್ಯಾನರ್ಜಿಯನ್ನು ಶ್ಲಾಘಿಸಿದ ದಾಸ್, ಅನೇಕ ಜನರು ಮತ್ತು ಸಂಘಟನೆಗಳು ಬ್ಯಾನರ್ಜಿಯವರು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಮತ್ತು ಅವರು ಬಂಗಾಳಿ ಆಗಿದ್ದರಿಂದ ಆ ಸ್ಥಾನಕ್ಕೆ ಅವರ ಪದೋನ್ನತಿ ಬಹಳ ಮಹತ್ವದ್ದಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Lakhimpur Kheri ಲಖಿಂಪುರ್ ಖೇರಿ ಘಟನೆ: ರೈತ ಮುಖಂಡ ರಾಕೇಶ್ ಟಿಕಾಯತ್ ಸಹಾಯದೊಂದಿಗೆ ಪರಿಸ್ಥಿತಿ ನಿಯಂತ್ರಿಸಿದ್ದು ಹೇಗೆ?