ನೂತನ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಮಧ್ಯರಾತ್ರಿ ನಿರ್ಧಾರ ಅಸಭ್ಯವಾದುದು; ರಾಹುಲ್ ಗಾಂಧಿ ಆಕ್ಷೇಪ

ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ಕುರಿತ ನೂತನ ಕಾನೂನಿನಡಿಯಲ್ಲಿ ನೇಮಕಗೊಂಡ ಮೊದಲ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಆಗಿದ್ದಾರೆ. ಜ್ಞಾನೇಶ್ ಕುಮಾರ್ ಅಧಿಕಾರಾವಧಿ 2029ರ ಜನವರಿ 26ರವರೆಗೆ ಇರುತ್ತದೆ.

ನೂತನ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಮಧ್ಯರಾತ್ರಿ ನಿರ್ಧಾರ ಅಸಭ್ಯವಾದುದು; ರಾಹುಲ್ ಗಾಂಧಿ ಆಕ್ಷೇಪ
Rahul Gandhi On Cec

Updated on: Feb 18, 2025 | 6:47 PM

ನವದೆಹಲಿ: ಸೋಮವಾರ ತಡರಾತ್ರಿ ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನೇಮಕ ಮಾಡಿರುವುದು ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಜ್ಞಾನೇಶ್ ಕುಮಾರ್ ಅವರ ತಡರಾತ್ರಿ ನೇಮಕವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವನ್ನು ಅಗೌರವ ಮತ್ತು ಅಸಭ್ಯವಾದುದು ಎಂದು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯ ಸಭೆ ನಡೆದ ಕೆಲವೇ ಗಂಟೆಗಳ ಬಳಿಕ ಸೋಮವಾರ ತಡರಾತ್ರಿ ಕೇಂದ್ರ ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿತ್ತು.

ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ರೂಪಿಸಲಾಗಿರುವ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವವರೆಗೆ ಹೊಸ ಸಿಇಸಿ ನೇಮಕ ನಿರ್ಧಾರವನ್ನು ಮುಂದೂಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಸುಪ್ರೀಂ ಕೋರ್ಟ್ ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಆದರೆ, ಅಷ್ಟರೊಳಗೆ ನೂತನ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಗಿದೆ.


ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಸಭೆಗೆ ನನ್ನ ಒಪ್ಪಿಗೆಯಿಲ್ಲ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಅದರಲ್ಲಿ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಮಾಡಬಾರದು ಎಂದು ಉಲ್ಲೇಖಿಸಿರುವುದಾಗಿ ರಾಹುಲ್ ಗಾಂಧಿ ಎಕ್ಸ್​ನಲ್ಲಿ ಆ ಪತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ನಿಷೇಧಿತ ಚೀನೀ ಡ್ರೋನ್ ಬಳಕೆ; ಏನಿದು ಹೊಸ ವಿವಾದ?

ಮಾರ್ಚ್ 2, 2023ರಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯನ್ನು ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಆ ಆದೇಶವನ್ನು ಮೋದಿ ಸರ್ಕಾರ ಉಲ್ಲಂಘಿಸಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

 

ನಿನ್ನೆ ಸಂಜೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆ ನಡೆಯಿತು. ಬಳಿಕ ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಲಾಯಿತು. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಆ ಸಭೆಯಲ್ಲಿ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಮಂಡಿಸಿದ ಸಮಿತಿಯ ಸದಸ್ಯರಾಗಿದ್ದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಧಿಕಾರಾವಧಿಯು 2029ರ ಜನವರಿ 26ರವರೆಗೆ ಇರಲಿದೆ. 1989ರ ಬ್ಯಾಚ್ ಹರಿಯಾಣ-ಕೇಡರ್ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ವಿವೇಕ್ ಜೋಶಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ