
ನವದೆಹಲಿ, ಜನವರಿ 29: ನರೇಂದ್ರ ಮೋದಿಯ (PM Modi) ಹವಾ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂಬ ವದಂತಿಗಳು ಹಾಗೂ ವರದಿಗಳ ನಡುವೆ ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯು ಇಂದೇ ಲೋಕಸಭಾ ಚುನಾವಣೆ (Lok Sabha Elections) ನಡೆದರೂ ಎನ್ಡಿಎ ಭಾರೀ ಜಯ ಸಾಧಿಸಲಿದೆ ಎಂದು ಬಹಿರಂಗಪಡಿಸಿದೆ. ಇಂದೇ ಸಾರ್ವತ್ರಿಕ ಚುನಾವಣೆ ನಡೆದರೂ ಎನ್ಡಿಎ 352 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸಿವೆ. ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ಜೊತೆಗಿನ ರಾಜಕೀಯ ಉದ್ವಿಗ್ನತೆಯ ನಡುವೆಯೂ ಪ್ರಧಾನಿ ಮೋದಿಯ ಮೇಲಿನ ಮತದಾರರ ನಂಬಿಕೆ ಹಾಗೆಯೇ ಉಳಿದಿದೆ ಎಂದು ಅಂಕಿಅಂಶಗಳು ತೋರಿಸಿವೆ.
ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಇಂದೇ ಲೋಕಸಭಾ ಚುನಾವಣೆ ನಡೆದರೆ NDA 352 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಈ ಮುನ್ಸೂಚನೆಯು ಬಿಜೆಪಿ ಮೈತ್ರಿಕೂಟಕ್ಕೆ ದೇಶದಲ್ಲಿರುವ ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ಇಂದು (ಜನವರಿ 29) ಬಿಡುಗಡೆಯಾದ ಈ ಸಮೀಕ್ಷೆ NDAಗೆ ದೇಶದಲ್ಲಿ ಸ್ಥಿರವಾದ ಸ್ಥಾನವಿದೆ ಎಂಬ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.
ಒಂದುವೇಳೆ ಈಗಲೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ 352 ಸ್ಥಾನಗಳನ್ನು ಪಡೆಯಲಿದೆ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯ ಬಣವು 182 ಸ್ಥಾನಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ಜನರೊಂದಿಗಿನ ಎನ್ಡಿಎ ಬಾಂಧವ್ಯವನ್ನು ಸೂಚಿಸುತ್ತದೆ; ಬಿಎಂಸಿ ಚುನಾವಣೆಯ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ
2026ರ ವಿಧಾನಸಭಾ ಚುನಾವಣೆಗಳಿಗೂ ಮುಂಚಿತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಸಮೀಕ್ಷೆ ಬಹಳ ನಿರ್ಣಾಯಕ ಹೆಜ್ಜೆಯಾಗಿದೆ. 5 ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ. ಇವುಗಳಲ್ಲಿ, ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಈ ಹಿಂದೆ ಎಂದಿಗೂ ಬಿಜೆಪಿ ಅಧಿಕಾರಕ್ಕೇರಿಲ್ಲ. ಹೀಗಾಗಿ, ಈ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸಲೇಬೇಕೆಂಬ ಹಠ ಬಿಜೆಪಿ ನಾಯಕರದ್ದು.
ಪಕ್ಷವಾರು ಅಂಕಿ-ಅಂಶಗಳನ್ನು ನೋಡುವುದಾದರೆ, ಈಗ ಲೋಕಸಭಾ ಚುನಾವಣೆಗಳು ನಡೆದರೆ, ಬಿಜೆಪಿ 287 ಸ್ಥಾನಗಳನ್ನು ಗಳಿಸುತ್ತದೆ ಮತ್ತು ಸ್ವಂತವಾಗಿ ಸರ್ಕಾರ ರಚಿಸುತ್ತದೆ ಎಂದು MOTN ಸಮೀಕ್ಷೆ ಭವಿಷ್ಯ ನುಡಿದಿದೆ. ಆಗಸ್ಟ್ 2025ರ MOTN ಸಮೀಕ್ಷೆಯು ಬಿಜೆಪಿ 260 ಸ್ಥಾನಗಳನ್ನು ಗಳಿಸುತ್ತದೆ ಎಂದು ಭವಿಷ್ಯ ನುಡಿದಿತ್ತು.
ಸ್ಥಿರ ನಾಯಕತ್ವ ಮತ್ತು ‘ಬ್ರ್ಯಾಂಡ್ ಮೋದಿ’ ಮೇಲಿನ ನಂಬಿಕೆಯು ಎನ್ಡಿಎಯನ್ನು ಉತ್ತಮ ಸ್ಥಾನದಲ್ಲಿರಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧದ ಮಿಲಿಟರಿ ಪ್ರತಿಕ್ರಿಯೆ, ಭಾರತವು ಟ್ರಂಪ್ ಅವರ ಸುಂಕ ಮತ್ತು ವ್ಯಾಪಾರ ತಂತ್ರಗಳಿಗೆ ಮಣಿಯದಿರುವುದು, ಯುಕೆ ಮತ್ತು ಯುರೋಪಿಯನ್ ಒಕ್ಕೂಟ (EU) ಜೊತೆ ಒಪ್ಪಂದಗಳನ್ನು ಮಾಡಿಕೊಂಡಿರುವುದು ದೇಶೀಯವಾಗಿ ಮತ್ತು ಜಾಗತಿಕವಾಗಿ ಮೋದಿಯವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.
ಕಾಂಗ್ರೆಸ್‌ಗೆ ಸಂಬಂಧಿಸಿದಂತೆ, MOTN ಸಮೀಕ್ಷೆಯು 80 ಸ್ಥಾನಗಳು ಸಿಗಬಹುದು ಎಂದು ಭವಿಷ್ಯ ನುಡಿದಿದೆ. ಇದು ಆಗಸ್ಟ್ 2025ರ ಸಮೀಕ್ಷೆಯಲ್ಲಿ ಹೇಳಲಾಗಿದ್ದ 97 ಸ್ಥಾನಗಳಿಗಿಂತ ತೀವ್ರ ಕುಸಿತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 pm, Thu, 29 January 26