ಮುಂಗಾರು ಅಧಿವೇಶನಕ್ಕೆ ಆಗಮಿಸುವ ಸಂಸದರಿಗೆ ಆರ್ಟಿಪಿಸಿಆರ್ ಪರೀಕ್ಷೆ ಅಗತ್ಯವಿಲ್ಲ: ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ
ಒಟ್ಟು 323 ಸಂಸದರು ಮಾತ್ರ ಎರಡೂ ಡೋಸ್ ಕೊವಿಡ್ ಲಸಿಕೆಯನ್ನು ಪಡೆದುಕೊಂಡಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ 23 ಸಂಸದರು ಒಂದು ಡೋಸ್ ಲಸಿಕೆಯನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.
ದೆಹಲಿ: ಮುಂಬರುವ ಜುಲೈ 19ನೇ ತಾರೀಖಿನಿಂದ ಸಂಸತ್ ಅಧಿವೇಶನ ನಡೆಯಲಿದ್ದು, ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಕೊವಿಡ್ ತಡೆ ನಿಯಮಾನುಸಾರವಾಗಿಯೇ ಅಧಿವೇಶನ ನಡೆಸಲಾಗುವುದು ಎಂದು ಘೋಷಿಸಲಾಗಿದ್ದರೂ, ಅಧಿವೇಶನಕ್ಕೆ ಆಗಮಿಸುವ ಸಂಸದರು ಮತ್ತು ಪತ್ರಕರ್ತರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯವಲ್ಲ ಎಂದು ಅವರು ತಿಳಿಸಿದ್ದಾರೆ.
ಈವರೆಗೆ ದೇಶದ ಎಲ್ಲಾ ಸಂಸದರೂ ಕೊವಿಡ್ ಲಸಿಕೆಯನ್ನು ಸಂಪೂರ್ಣವಾಗಿ ಪಡೆದಿಲ್ಲ. ಒಟ್ಟು 323 ಸಂಸದರು ಮಾತ್ರ ಎರಡೂ ಡೋಸ್ ಕೊವಿಡ್ ಲಸಿಕೆಯನ್ನು ಪಡೆದುಕೊಂಡಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ 23 ಸಂಸದರು ಒಂದು ಡೋಸ್ ಲಸಿಕೆಯನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.
ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮುಂಗಾರು ಅಧಿವೇಶನವು ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಜರುಗಲಿದೆ. ಲೋಕಸಭೇಯ ಬಹುತೇಕ ಸದಸ್ಯರು ಈವರೆಗೆ ಕೊವಿಡ್ ಲಸಿಕೆ ಪಡೆದುಕೊಂಡಿದ್ದರೂ, ಕೆಲವರು ಅಗತ್ಯ ಕಾರಣಗಳಿಂದ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಕೊವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಇದೇ ಸಂರ್ಭದಲ್ಲಿ ಕರೆ ನೀಡಿದರು.
ಮುಂಗಾರು ಅಧಿವೇಶನ ನಡೆಯುವ ಎಲ್ಲ ದಿನ ಸಂಸತ್ತಿನ ಎದುರು ರೈತರ ಧರಣಿ: ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ ನೂತನ ಕೃಷಿ ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 40 ರೈತ ಸಂಘಟನೆಗಳ ಕೇಂದ್ರ ಸಮಿತಿ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನ ಮುಂಗಾರು ಅಧಿವೇಶನ ಸಂದರ್ಭದಲ್ಲಿ ಪ್ರತಿದಿನ ಸಂಸತ್ ಭವನದ ಎದುರು ಧರಣಿ ನಡೆಸುವುದಾಗಿ ತಿಳಿಸಿದೆ. ಈ ಬಗ್ಗೆ ಚೇತವನಿ ಪತ್ರವನ್ನು (ಎಚ್ಚರಿಕೆ ಪತ್ರ) ಪ್ರತಿಪಕ್ಷಗಳ ಎಲ್ಲ ಸಂಸದರಿಗೆ ನೀಡುವುದಾಗಿ ಮೋರ್ಚಾ ತಿಳಿಸಿದೆ. ಕೃಷಿ ಕಾನೂನು ರದ್ದತಿಗೆ ಒತ್ತಾಯಿಸಿ ಸಂಸತ್ ಭವನದ ಒಳಗೂ ಪ್ರತಿಭಟನೆ ನಡೆಸಬೇಕೆಂದು ವಿನಂತಿಸಲಾಗುವುದು ಎಂದು ತಿಳಿಸಿದೆ.
ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ 200 ರೈತರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಪ್ರಕಟಿಸಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ 40ಕ್ಕೂ ರೈತ ಸಂಘಟನೆಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿನಿಧಿಸುತ್ತದೆ. ಅಧಿವೇಶನ ಆರಂಭಕ್ಕೂ 2 ದಿನ ಮೊದಲು ಪ್ರತಿಪಕ್ಷಗಳ ಎಲ್ಲ ಸದಸ್ಯರಿಗೂ ಸೂಚನಾ ಪತ್ರ ನೀಡಲಾಗುವುದು ಎಂದು ಮೋರ್ಚಾ ಹೇಳಿದೆ.
‘ನಾವು ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿರುತ್ತೇವೆ. ಈ ಸಂದರ್ಭ ಪ್ರತಿದಿನವೂ ಅಧಿವೇಶನದಲ್ಲಿ ಕೃಷಿ ಕಾಯ್ದೆಯ ವಿಚಾರವನ್ನು ಪ್ರಸ್ತಾಪಿಸಬೇಕೆಂದು ವಿನಂತಿಸುತ್ತೇವೆ. ಸಭಾತ್ಯಾಗದ ಮೂಲಕ ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡಿಕೊಡಬೇಡಿ ಎಂದು ಹೇಳುತ್ತೇವೆ. ಸರ್ಕಾರವು ಕೃಷಿ ಕಾಯ್ದೆಗಳ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೂ ಅಧಿವೇಶನ ನಡೆಯಲು ಬಿಡಬಾರದು’ ಎಂದು ರೈತ ನಾಯಕ ಗುರ್ನಮ್ ಸಿಂಗ್ ಚರುನಿ ಹೇಳಿದರು.
ಇದನ್ನೂ ಓದಿ:
Cabinet Reshuffle: ನರೇಂದ್ರ ಮೋದಿ ಸಚಿವ ಸಂಪುಟ ಸೇರಿದ ನೂತನ ಸಚಿವರ ಕಿರು ಪರಿಚಯ
(Monsoon Session 2021 MP and journalist one who enters session not mandatory RT PCR Lok Sabha speaker Om Prakash Birla)