Rajeev Chandrasekhar: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಬ್ಯಾಡ್ಜ್ ಮಾಯ..; ಕಾರಣ ಸ್ಪಷ್ಟಪಡಿಸಿದ ಟ್ವಿಟರ್
ಸದ್ಯ ಭಾರತದಲ್ಲಿ ಕೇಂದ್ರ ಸರ್ಕಾರದ ಐಟಿ ನಿಯಮಗಳ ಪಾಲನೆ ಸಂಬಂಧಪಟ್ಟು ಟ್ವಿಟರ್ ಮತ್ತು ಕೇಂದ್ರದ ನಡುವೆ ಕೆಲವು ತಿಕ್ಕಾಟಗಳು ನಡೆಯುತ್ತಿವೆ. ಟ್ವಿಟರ್ ಇಂಡಿಯಾದ ಕುಂದುಕೊರತೆ ಸ್ಥಾನಿಕ ಅಧಿಕಾರಿಯನ್ನಾಗಿ ಟ್ವಿಟರ್ ವಿನಯ್ ಪ್ರಕಾಶ್ ಅವರನ್ನು ನಿನ್ನೆಯಷ್ಟೇ ನೇಮಕ ಮಾಡಿದೆ.
ಇತ್ತೀಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಆರ್ಎಸ್ಎಸ್ನ ಕೆಲವು ಮುಖಂಡರ ಟ್ವಿಟರ್ (Twitter) ಖಾತೆಯ ದೃಢೀಕರಣ ಬ್ಯಾಡ್ಜ್ ಬ್ಲ್ಯೂಟಿಕ್ನ್ನು ತೆಗೆದು ಹಾಕುವ ಮೂಲಕ ಟ್ವಿಟರ್ ವಿವಾದ ಸೃಷ್ಟಿಸಿತ್ತು. ಇದೀಗ ನೂತನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ( Rajeev Chandrasekhar) ಅವರ ಖಾತೆಯ ಬ್ಲ್ಯೂಟಿಕ್ (blue tick) ನ್ನು ಟ್ವಿಟರ್ ತೆಗೆದು ಹಾಕಿದೆ. ವಿದ್ಯುತ್ – ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರ ಟ್ವಿಟರ್ ಅಕೌಂಟ್ನಲ್ಲಿ ಹೆಸರು ಬದಲಾವಣೆ ಆಗಿರುವ ಕಾರಣಕ್ಕೆ ನೀಲಿ ಟಿಕ್ನ್ನು ತೆಗೆದಿದ್ದಾಗಿ ಟ್ವಿಟರ್ ಸ್ಪಷ್ಟನೆ ನೀಡಿದೆ.
ಇಷ್ಟುದಿನ ರಾಜ್ಯ ಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದು ಕೇಂದ್ರ ಮಂತ್ರಿಯಾಗಿದ್ದಾರೆ. ಈ ಹಿಂದೆ ಅವರು Rajeev MP ಹೆಸರಿನಲ್ಲಿ ಟ್ವಿಟರ್ ಅಕೌಂಟ್ ಹೊಂದಿದ್ದರು. ಆದರೀಗ Rajeev_GOI ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಟ್ವಿಟರ್ನ ದೃಢೀಕರಣ ನೀತಿ ಅನ್ವಯ ಯಾವುದೇ ಬಳಕೆದಾರ ಬ್ಲ್ಯೂಟಿಕ್ ಪಡೆಯುವಾಗ ಇರುವ ಹೆಸರನ್ನು ಮಧ್ಯದಲ್ಲಿ ಯಾವಾಗಲಾದರೂ ಬದಲಿಸಿದರೆ ಕೂಡಲೇ ಟ್ವಿಟರ್ ಅವರಿಗೆ ನೀಡಲಾದ ಬ್ಲ್ಯೂಟಿಕ್ ಬ್ಯಾಡ್ಜ್ನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲ, ಬ್ಲ್ಯೂಟಿಕ್ ಬ್ಯಾಡ್ಜ್ ಪಡೆದ ಬಳಕೆದಾರರ ಖಾತೆಗಳು ಸದಾ ಸಕ್ರಿಯವಾಗಿ ಇರಬೇಕಾಗುತ್ತದೆ. ಹಾಗೊಮ್ಮೆ ಆರು ತಿಂಗಳ ಕಾಲ ನಿಷ್ಕ್ರಿಯವಾದರೆ ಅವರ ಅಕೌಂಟ್ಗೆ ನೀಡಲಾಗಿದ್ದ ಬ್ಲ್ಯೂಟಿಕ್ನ್ನು ತೆಗೆದುಹಾಕುತ್ತದೆ.
ಸದ್ಯ ಭಾರತದಲ್ಲಿ ಕೇಂದ್ರ ಸರ್ಕಾರದ ಐಟಿ ನಿಯಮಗಳ ಪಾಲನೆ ಸಂಬಂಧಪಟ್ಟು ಟ್ವಿಟರ್ ಮತ್ತು ಕೇಂದ್ರದ ನಡುವೆ ಕೆಲವು ತಿಕ್ಕಾಟಗಳು ನಡೆಯುತ್ತಿವೆ. ಟ್ವಿಟರ್ ಇಂಡಿಯಾದ ಕುಂದುಕೊರತೆ ಸ್ಥಾನಿಕ ಅಧಿಕಾರಿಯನ್ನಾಗಿ ಟ್ವಿಟರ್ ವಿನಯ್ ಪ್ರಕಾಶ್ ಅವರನ್ನು ನಿನ್ನೆಯಷ್ಟೇ ನೇಮಕ ಮಾಡಿದ್ದು, ಸದ್ಯದಲ್ಲಿ ಭಾರತದಲ್ಲಿ ಟ್ವಿಟರ್ ಸಂಪರ್ಕ ಕಚೇರಿಯೊಂದು ನಿರ್ಮಾಣವಾಗಲಿದೆ ಎಂದೂ ತಿಳಿಸಿದೆ.
ಇದನ್ನೂ ಓದಿ: Twitter India: ಭಾರತದಲ್ಲಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್ರನ್ನು ನೇಮಕ ಮಾಡಿದ ಟ್ವಿಟರ್
Union Minister Rajeev Chandrasekhar loses blue tick Of his Twitter Account