ಭಾರತದಲ್ಲಿ ಕೊವಿಡ್-19 ವ್ಯಾಪಕವಾಗಿ ಹರಡಲು ಮೋದಿಯವರ ಅವೈಜ್ಞಾನಿಕ, ಅನಿಯೋಜಿತ ಲಾಕ್ಡೌನ್ ಕಾರಣ ಎಂದು ಆರೋಪಿಸಿರುವ ರಾಹುಲ್, ಜನರು ತಮ್ಮ ಜೀವ ರಕ್ಷಿಸಿಕೊಳ್ಳಲು ತಾವೇ ಪ್ರಯತ್ನಪಡಬೇಕು ಯಾಕೆಂದರೆ, ಪ್ರಧಾನಿ ಮೋದಿಯವರು ನವಿಲಿನೊಂದಿಗೆ ಆಟವಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಮೂದಲಿಸಿದ್ದಾರೆ.
‘‘ಭಾರತದಲ್ಲಿ ಈ ವಾರ ಕೊವಿಡ್-19 ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ತಲುಪಲಿದೆ. ಒಬ್ಬ ವ್ಯಕ್ತಿಯ ಅಹಂಕಾರದ ಪ್ರತೀಕವಾಗಿರುವ ಅವೈಜ್ಞಾನಿಕ ಲಾಕ್ಡೌನ್ ಇಡೀ ದೇಶದಲ್ಲಿ ಕೊರೊನಾ ಸೋಂಕು ಹರಡಲು ಕಾರಣವಾಯಿತು. ಮೋದಿ ಸರ್ಕಾರ ಜನರಿಗೆ ಆತ್ಮನಿರ್ಭರರಾಗಲು ಹೇಳುತ್ತಿದೆ. ಅದರರ್ಥ ನಿಮ್ಮ ಜೀವ ಉಳಿಸಿಕೊಳ್ಳಲು ನೀವೇ ಹೋರಾಡಬೇಕು, ಯಾಕೆಂದರೆ, ಪ್ರಧಾನಿಯವರು ನವಿಲಿನೊಂದಿಗೆ ಆಡುವುದರಲ್ಲಿ ವ್ಯಸ್ತರಾಗಿದ್ದಾರೆ@RahulGandhi’’
ಆದರೆ, ವಿಪರ್ಯಾಸದ ಸಂಗತಿಯೆಂದರೆ, ಸರ್ಕಾರದ ತಪ್ಪುಗಳತ್ತ ಬೊಟ್ಟು ಮಾಡಿ ತೋರುವ ರಾಹುಲ್ ಗಾಂಧಿ ಇಂದು ಆರಂಭಗೊಂಡಿರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಉಪಸ್ಥಿತರಿಲ್ಲ. ಅವರ ತಾಯಿ ಸೋನಿಯಾ ಗಾಂಧಿಯವರ ವೈದ್ಯಕೀಯ ತಪಾಸಣೆಗೆ ವಿದೇಶಕ್ಕೆ ಹಾರಿದ್ದಾರೆ. ಸಂಸತ್ತಿನಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಇದಕ್ಕಿಂತ ಉತ್ತಮ ಅವಕಾಶ ರಾಹುಲ್ಗಾಗಲೀ, ಕಾಂಗ್ರೆಸ್ಗಾಗಲೀ ಅಥವಾ ವಿರೋಧಪಕ್ಷಗಳ ಮಿತ್ರಕೂಟಕ್ಕಾಗಲೀ ಮತ್ತೊಂದಿಲ್ಲ.
ವಿದೇಶದಲ್ಲಿ ಕೂತು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವ ನಿರ್ಧಾರವನ್ನು ರಾಹುಲ್ ಮಾಡಿಕೊಂಡಿದ್ದಾರೆಯೇ?