ವಿಶ್ವದ ಎಲ್ಲ ರಾಷ್ಟ್ರಗಳಿಂಗಿಂತಲೂ ಮೊದಲು ಕೊರೊನಾ ಲಸಿಕೆ ನೀಡಲು ಶುರು ಮಾಡಿದ ಭಾರತ ಇದೀಗ ಕೊವಿಡ್ 19 ಲಸಿಕಾ ಅಭಿಯಾನ (Covid 19 Vaccination Drive)ದಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಅರ್ಹ ವಯಸ್ಕರು ಸಂಪೂರ್ಣವಾಗಿ ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಅಂದರೆ ಭಾರತದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರಿಗೆ ಎರಡೂ ಡೋಸ್ ಕೊರೊನಾ ಲಸಿಕೆ ಪೂರ್ಣಗೊಂಡಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ. ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಹೀಗೆ ಎಲ್ಲರೂ ಒಟ್ಟಾಗಿ ಸಾಗೋಣ ಎಂಬ ಸಂದೇಶ ನೀಡಿದ್ದಾರೆ.
ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೊವಿಡ್ 19 ವಿರುದ್ಧ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತೇವೆ. ಅಭಿನಂದನೆಗಳು ಭಾರತ..ದೇಶದಲ್ಲಿ ಶೇ.50ರಷ್ಟು ವಯಸ್ಕರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದು ಹೆಮ್ಮೆಯ ಕ್ಷಣ ಎಂದು ಹೇಳಿದ್ದರು. ಹಾಗೇ, ಈ ಟ್ವೀಟ್ನ್ನು ಇಂದು ಪ್ರಧಾನಿ ಮೋದಿ ರೀಟ್ವೀಟ್ ಮಾಡಿಕೊಂಡಿದ್ದು, ಭಾರತದ ಲಸಿಕೆ ಅಭಿಯಾನ ಇನ್ನೊಂದು ಮೈಲಿಗಲ್ಲು ದಾಟಿದೆ. ಕೊವಿಡ್ 19 ವಿರುದ್ಧ ಹೋರಾಟವನ್ನು ಬಲಪಡಿಸಿಕೊಳ್ಳಲು ಈ ವೇಗವನ್ನು ಕಾಯ್ದುಕೊಳ್ಳಬೇಕು. ಹಾಗೇ, ಕೊರೊನಾ ವಿರುದ್ಧದ ನಿಯಂತ್ರಣ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
India’s vaccination drive crosses another important milestone. Important to keep this momentum to strengthen the fight against COVID-19.
And yes, keep following all other COVID-19 related protocols including masking up and social distancing. https://t.co/a26Cy65Jv2
— Narendra Modi (@narendramodi) December 6, 2021
ದೇಶದಲ್ಲಿ ಒಟ್ಟಾರೆ 127.61 ಕೋಟಿ ಡೋಸ್ ಕೊವಿಡ್ 19 ಲಸಿಕೆ ನೀಡಲಾಗಿದೆ. ಅದರಲ್ಲಿ 79.90 ಕೋಟಿ ವಯಸ್ಕರಿಗೆ ಒಂದು ಡೋಸ್ ಮಾತ್ರ ಆಗಿದ್ದು, ಶೇ.47.71ಕೋಟಿ ಜನರಿಗೆ ಎರಡೂ ಡೋಸ್ ಸಂಪೂರ್ಣಗೊಂಡಿದೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಇಲಾಖೆ ಹೇಳಿತ್ತು. ಆದರೆ ಶನಿವಾರ ಒಂದೇ ದಿನ ದೇಶಾದ್ಯಂ ಒಟ್ಟೂ 1.04 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಅದರಲ್ಲಿ 75.12 ಕೋಟಿ ಲಕ್ಷ ಮಂದಿ ಎರಡನೇ ಡೋಸ್ ತೆಗೆದುಕೊಂಡವರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಎರಡೂ ಡೋಸ್ ಪೂರ್ಣಗೊಳಿಸಿದ ಅರ್ಹ ವಯಸ್ಕರ ಪ್ರಮಾಣ ಶೇ.50ಕ್ಕೂ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಶೇ.84.8ರಷ್ಟು ಮಂದಿಗೆ ಒಂದೇ ಡೋಸ್ ಲಸಿಕೆಯಾಗಿದೆ.
ಭಾರತದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಮೇ ತಿಂಗಳಲ್ಲಿ ಸರಾಸರಿ ಒಂದು ದಿನಕ್ಕೆ 16.69 ಲಕ್ಷ ಡೋಸ್ ನೀಡಲಾಗುತ್ತಿತ್ತು. ಅದು ನವೆಂಬರ್ ಹೊತ್ತಿಗೆ ಒಂದು ದಿನಕ್ಕೆ ಸರಾಸರಿ 59.32 ಲಕ್ಷ ಡೋಸ್ ಕೊಡಲಾಗುತ್ತಿದೆ. ಭಾರತದಲ್ಲಿ ಫೆಬ್ರವರಿ 19ರ ಹೊತ್ತಿಗೆ 1 ಕೋಟಿ ಡೋಸ್, ಏಪ್ರಿಲ್ 10ರಂದು 10 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ನಂತರ ಅಕ್ಟೋಬರ್ 21ಕ್ಕೆ 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳಿಸುವ ಮೂಲಕ ಒಂದು ಮೈಲಿಗಲ್ಲು ಸ್ಥಾಪಿಸಲಾಗಿತ್ತು. ಅಂತೆಯೇ ಒಂದು ದಿನಕ್ಕೆ ಒಂದು ಕೋಟಿ ಡೋಸ್ ನೀಡಿರುವ ದಾಖಲೆಗೂ ಭಾರತ ಸಾಕ್ಷಿಯಾಗಿದ್ದು, ಒಟ್ಟು 5 ಬಾರಿ ಈ ಸಾಧನೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು (ಸೆ.17) ದೇಶಾದ್ಯಂತ ಲಸಿಕೆ ಅಭಿಯಾನ ಮಾಡಿ, 2.5 ಕೋಟಿ ಡೋಸ್ ನೀಡಲಾಗಿತ್ತು. ಈಗಂತೂ ಒಮಿಕ್ರಾನ್ ಸೋಂಕು ಶುರುವಾಗಿರುವ ಹಿನ್ನೆಲೆಯಲ್ಲಿ ಜನರೂ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ.
ಇದನ್ನೂ ಓದಿ: ಶೋಪಿಯಾನ್ನಲ್ಲಿ ಇಬ್ಬರು ಎಲ್ಇಟಿ ಉಗ್ರರ ಬಂಧನ; ಅವರ ಬಳಿಯಿದ್ದ ಚೈನೀಸ್ ಪಿಸ್ತೂಲ್, ಗ್ರೆನೇಡ್ ವಶ
Published On - 9:58 am, Mon, 6 December 21