ಶೋಪಿಯಾನ್ನಲ್ಲಿ ಇಬ್ಬರು ಎಲ್ಇಟಿ ಉಗ್ರರ ಬಂಧನ; ಅವರ ಬಳಿಯಿದ್ದ ಚೈನೀಸ್ ಪಿಸ್ತೂಲ್, ಗ್ರೆನೇಡ್ ವಶ
ಭದ್ರತಾ ಪಡೆಗಳು ತಮ್ಮನ್ನು ಸುತ್ತುವರಿದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ರಕ್ಷಣಾ ಪಡೆಗಳು ಅದಕ್ಕೆ ಅವಕಾಶ ಕೊಡದೆ ಸೆರೆಹಿಡಿದಿದ್ದಾರೆ.
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಲಷ್ಕರ್ ಇ ತೊಯ್ಬಾ (LeT)ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಶೋಪಿಯಾನಾದ ರಂಬಿ ಅರಾ ಸಮೀಪದ ದೂಮ್ವಾನಿ ಗ್ರಾಮದಲ್ಲಿ ಲಷ್ಕರ್ ಇ ತೊಯ್ಬಾದ ಉಗ್ರ ಶಾಹೀದ್ ಅಹ್ಮದ್ ಗಯೆ ಮತ್ತು ಆತನ ಆಪ್ತ ಅಡಗಿದ್ದಾರೆ ಎಂದು ಖಚಿತ ಮಾಹಿತಿ ಪಡೆದು ಭದ್ರತಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ತಮ್ಮನ್ನು ಸುತ್ತುವರಿದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ರಕ್ಷಣಾ ಪಡೆಗಳು ಅದಕ್ಕೆ ಅವಕಾಶ ಕೊಡದೆ ಸೆರೆಹಿಡಿದಿದ್ದಾರೆ ಎಂದು ಹೇಳಿದ್ದಾರೆ. ಬಂಧಿತರಲ್ಲಿ ಶಾಹಿದ್ ಅಹ್ಮದ್ ಗಯೆ ದೂಮ್ವಾನಿ ಕೀಗಮ್ ನಿವಾಸಿಯಾಗಿದ್ದು, ಇನ್ನೊಬ್ಬಾತ ಕಿಫಾಯತ್ ಅಯೋಬ್ ಅಲಿ ಎಂಬುವನು ಪಿಂಜೀರಾ ಶೋಪಿಯಾನ್ದ ನಿವಾಸಿಯಾಗಿದ್ದಾನೆ. ಬಂಧಿತ ಭಯೋತ್ಪಾದಕರಿಂದ ಚೈನೀಸ್ ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜಿನ್, ಎರಡು ಚೈನೀಸ್ ಗ್ರೆನೇಡ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಹಾಗೇ, 2.9 ಲಕ್ಷ ರೂಪಾಯಿ ನಗದು ಕೂಡ ಸಿಕ್ಕಿದೆ ಎಂದು ವಕ್ತಾರ ಮಾಹಿತಿ ನೀಡಿದ್ದಾರೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಶುರುವಾಗಿದೆ.
ಇದನ್ನೂ ಓದಿ: ಮಳೆರಾಯನ ಆರ್ಭಟ; ಅಪಾಯದ ಸುಳಿಯಲ್ಲಿ ಸುವರ್ಣ ಮುಖಿ ನದಿ ಸೇತುವೆ, ಆತಂಕದಲ್ಲಿ ಸ್ಥಳೀಯ ರೈತರು