ಕಪಾಳಮೋಕ್ಷ ಮಾಡಿದಕ್ಕೆ ನಾನೇ ನನ್ನ ಸ್ನೇಹಿತನನ್ನು ಕೊಂದೆ: ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಪ್ಪೊಪ್ಪಿಕೊಂಡ ಯುವಕ
ಈಶಾನ್ಯ ದೆಹಲಿಯ ಮೌಜ್‌ಪುರ ಕೆಫೆಯಲ್ಲಿ 24 ವರ್ಷದ ಫೈಜಾನ್ ಹತ್ಯೆಯ ಪ್ರಕರಣದಲ್ಲಿ, ಆರೋಪಿ ವೈಯಕ್ತಿಕ ದ್ವೇಷಕ್ಕಾಗಿ ಕೊಲೆ ಮಾಡಿರುವುದಾಗಿ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ನಾಲ್ಕು ತಿಂಗಳ ಹಿಂದಿನ ಹಳೆಯ ದ್ವೇಷವೇ ಕಾರಣ ಎಂದಿದ್ದು, ಹಣದ ವಿವಾದ ಅಥವಾ ಕುಟುಂಬದ ಪಾತ್ರವನ್ನು ನಿರಾಕರಿಸಿದ್ದಾನೆ. ಆದರೆ, ಮೃತನ ಸಹೋದರ ಸಲ್ಮಾನ್, ಹಣಕಾಸಿನ ವಿವಾದ ಮತ್ತು ಕೊಲೆಗಾರನ ತಂದೆಯ ಪಾತ್ರವನ್ನು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೆಹಲಿ, ಜ.24: ಈಶಾನ್ಯ ದೆಹಲಿಯ ಮೌಜ್‌ಪುರದ ಕೆಫೆಯೊಂದರಲ್ಲಿ (Delhi Cafe Shooting) 24 ವರ್ಷದ ಯುವಕನನ್ನು ಗುಂಡಿಕ್ಕಿ ಕೊಂದ ಘಟನೆಯೊಂದು ನಡೆದಿದೆ. ಇದೀಗ ಈ ಕೊಲೆಯ ಬಗ್ಗೆ ಆರೋಪಿ ತಪ್ಪೊಪ್ಪಿಗೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ಗುಂಡಿಕ್ಕಿ ಕೊಂದ ನಂತರ ಮನಕಲಕುವ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾನೆ. ಗುರುವಾರ (ಜ22) ರಾತ್ರಿ ವೈಯಕ್ತಿಕ ದ್ವೇಷಕ್ಕಾಗಿ 24 ವರ್ಷದ ಫೈಜಾನ್ ಎಂಬ ಯುವಕನನ್ನು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. @moinqureshiii_’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವು ತಿಂಗಳ ಹಿಂದೆ ಫೈಜಾನ್ ನನಗೆ ಹೊಡೆದ ಎಂಬ ಕಾರಣಕ್ಕೆ ನಾನು ಅವನನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಈ ಕೊಲೆಯಲ್ಲಿ ನನ್ನ ಕುಟುಂಬ ಅಥವಾ ಸ್ನೇಹಿತರ ಯಾವುದೇ ಪಾತ್ರ ಇಲ್ಲ ಎಂದು ಹೇಳಿದ್ದಾನೆ.
ನಾನು ಫೈಜಾನ್‌ನನ್ನು ವೈಯಕ್ತಿಕ ದ್ವೇಷದಿಂದ ಕೊಂದೆ. ಇದರಲ್ಲಿ ನನ್ನ ತಂದೆಯ ಯಾವುದೇ ಪಾತ್ರವಿಲ್ಲ, ನನ್ನ ಕುಟುಂಬ ಅಥವಾ ಸ್ನೇಹಿತರಿಗೆ ಯಾವುದೇ ಸಂಬಂಧವಿಲ್ಲ. ನನ್ನ ಮನೆಯವರ ಮಾತು ಕೇಳಿ ಆತನನ್ನು ಕೊಂದಿಲ್ಲ. ಹಾಗೂ ಈ ಕೊಲೆಯನ್ನು ಹಣಕ್ಕಾಗಿ ಮಾಡಿಲ್ಲ. ನಾಲ್ಕು ತಿಂಗಳ ಹಿಂದೆ ನನಗೆ ಕಪಾಳಮೋಕ್ಷ ಮಾಡಿದ್ದ, ಆ ಕಾರಣಕ್ಕೆ ಕೋಪಗೊಂಡು ನಾನು ಕೊಲೆ ಮಾಡಿದ್ದಾನೆ. ಈ ವಿಷಯವು ಹಣಕ್ಕೆ ಸಂಬಂಧಿಸಿದೆ ಎಂಬ ಫೈಜಾನ್ ಅವರ ಸಹೋದರನ ಹೇಳಿಕೆಯನ್ನು ಸುಳ್ಳು ಎಂದು ಹೇಳಿದ್ದಾನೆ.
ಫೈಜಾನ್ ಅಣ್ಣ ಹೇಳಿರುವ ಪ್ರಕಾರ, ನನ್ನ ತಮ್ಮನ್ನು ಹಣಕ್ಕಾಗಿ ಕೊಲೆ ಮಾಡಿದ್ದಾರೆ. ಇದರಲ್ಲಿ ಕೊಲೆಗಾರನ ತಂದೆ, ಸ್ನೇಹಿತರ ಕೈವಾಡ ಇದೆ ಎಂದು ಹೇಳಿದ್ದಾರೆ. ಹಣಕ್ಕಾಗಿ ತನ್ನ ತಮ್ಮ ಜತೆಗೆ ಕೊಲೆಗಾರನ ತಂದೆ ಜಗಳ ಮಾಡಿದ್ದಾರೆ. ಈ ಜಗಳ ನಂತರವೇ ತಮ್ಮನ ಕೊಲೆಯಾಗಿದೆ. ಕೊಲೆಗಾರ ಹಾಗೂ ಆತನ ತಂದೆ ಈಗಲೇ ಬಂಧಿಸಬೇಕು ಎಂದು ಫೈಜಾನ್ ಸಹೋದರ ಸಲ್ಮಾನ್ ಹೇಳಿದ್ದಾರೆ. ಫೈಜಾನ್ ಸಾಲ ಪಡೆದಿದ್ದ, ಮರುಪಾವತಿಸಲು ಸಾಧ್ಯವಾಗದಿದ್ದಾಗ, ತಂದೆ ಮತ್ತು ಮಗ ನಮ್ಮ ಮನೆಗೆ ಬಂದು ಜಗಳವಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಗುರುವಾರ ರಾತ್ರಿ 10:28 ರ ಸುಮಾರಿಗೆ ಮೌಜ್‌ಪುರದ ಮಿಸ್ಟರ್ ಕಿಂಗ್ ಲೌಂಜ್ ಮತ್ತು ಕೆಫೆಯಲ್ಲಿ ವೆಲ್ಕಮ್ ಪ್ರದೇಶದ ನಿವಾಸಿ ಫೈಜಾನ್ ಅವರನ್ನು ಗುಂಡಿಕ್ಕಿ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ಮದುವೆಯಾಗಿ 2 ತಿಂಗಳಿಗೆ ಕಳೆದುಕೊಂಡಳು ಜೀವ: ಯುವತಿ ಪ್ರಾಣ ಪಡೆದ ಸಿಟಿ ವ್ಯಾಮೋಹ!
ಗಂಭೀರವಾಗಿ ಗಾಯಗೊಂಡಿದ್ದ ಫೈಜಾನ್ ಅನ್ನು ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗಲೇ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೂರು ಗುಂಡುಗಳು ತನ್ನ ಸಹೋದರನಿಗೆ ತಗುಲಿದೆ. ಒಂದು ಅವನ ತಲೆಗೆ ಹಾಗೂ ಎರಡು ಎದೆಗೆ ಹೊಕ್ಕವು, ಅವನ ಕೈಯಲ್ಲಿ ಗಾಯದ ಗುರುತು ಕೂಡ ಇದೆ ಸಲ್ಮಾನ್ ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
