ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಬಿಹಾರದ ದರ್ಭಾಂಗ ಪ್ರದೇಶದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಗಳೊಂದಿಗೆ ತಂಡವೊಂದು ಮುಂಬೈಗೆ ಮರಳುತ್ತಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಕೇಶ್ ಅಂಬಾನಿ ಅವರ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದ ನಂತರ ತಕ್ಷಣ ಕಾರ್ಯೋನ್ಮುಖರಾದ ಮುಂಬೈ ಪೊಲೀಸರ ತಂಡ ಬಿಹಾರದ ಪೊಲೀಸರ ಸಹಾಯದಿಂದ ಮಧ್ಯರಾತ್ರಿ ಬಿಹಾರದ ದರ್ಭಾಂಗಾದಲ್ಲಿ ಆರೋಪಿಯನ್ನು ಬಂಧಿಸಿದೆ. ಆರೋಪಿಯೊಂದಿಗೆ ತಂಡವೊಂದು ಮುಂಬೈಗೆ ಮರಳುತ್ತಿದೆ ಎಂದು ಡಿಸಿಪಿ ನೀಲೋತ್ಪಾಲ್ ತಿಳಿಸಿದ್ದಾರೆ.
ಬುಧವಾರ ಅಪರಿಚಿತ ವ್ಯಕ್ತಿಯೊಬ್ಬರು ದಕ್ಷಿಣ ಮುಂಬೈನ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ ಆ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಅವರು ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಮತ್ತು ಅವರ ಮಗ ಆಕಾಶ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಅಂಬಾನಿ ನಿವಾಸವಾದ ಆಂಟಿಲಿಯಾವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು.
ಕಳೆದ 2 ತಿಂಗಳ ಅವಧಿಯಲ್ಲಿ ರಿಲಯನ್ಸ್ ಆಸ್ಪತ್ರೆಗೆ ಬೆದರಿಕೆ ಕರೆಗಳು ಬಂದಿರುವುದು ಇದು ಎರಡನೇ ಬಾರಿ. ಈ ವರ್ಷದ ಆಗಸ್ಟ್‌ನಲ್ಲಿ ಇದೇ ರೀತಿಯ ಕರೆಯನ್ನು ಮಾಡಿದ್ದ 56 ವರ್ಷದ ಆಭರಣ ವ್ಯಾಪಾರಿ ವಿಷ್ಣು ವಿಧು ಭೌಮಿಕ್ ಎಂಬುವವರನ್ನು ಬಂಧಿಸಲಾಗಿತ್ತು. ಆ ಆರೋಪಿಯು ತನ್ನನ್ನು ಅಫ್ಜಲ್ ಗುರು ಎಂದು ಗುರುತಿಸಿಕೊಂಡಿದ್ದು, ಮುಂದಿನ 3 ಗಂಟೆಗಳಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಆತ ಹೇಳಿಕೊಂಡಿದ್ದ.
ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆ ಮತ್ತು ಅಂಬಾನಿ ಕುಟುಂಬಕ್ಕೆ ಬಾಂಬ್ ಬೆದರಿಕೆ
ಇತ್ತೀಚೆಗೆ, ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ಕೇಂದ್ರ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳಿಂದ ಮಾಹಿತಿ ಸಿಕ್ಕ ನಂತರ ಸರ್ಕಾರವು ಮುಖೇಶ್ ಅಂಬಾನಿಗೆ Z+ ಭದ್ರತೆಯನ್ನು ನೀಡಿತ್ತು. ನೀತಾ ಅಂಬಾನಿಗೆ ಕೂಡ — Y+ ಭದ್ರತೆ ನೀಡಲಾಗಿತ್ತು.
ಬುಧವಾರ ಬಾಂಬ್ ಸ್ಫೋಟದ ಬೆದರಿಕೆ ಬಂದ ನಂತರ ರಿಲಯನ್ಸ್ ಆಸ್ಪತ್ರೆ ಮತ್ತು ಆಂಟಿಲಿಯಾ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.