ಹನುಮಾನ್ ಚಾಲೀಸಾ ವಿವಾದ; ಸಂಸದೆ ನವನೀತ್ ರಾಣಾ-ಶಾಸಕ ರವಿ ರಾಣಾಗೆ ಅಂತೂ ಸಿಕ್ತು ಜಾಮೀನು, ಕೋರ್ಟ್​​ನಿಂದ ಎಚ್ಚರಿಕೆ

ಉದ್ಧವ್ ಠಾಕ್ರೆಯ ಮನೆಯೆದುರು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಹೇಳಿದ್ದಲ್ಲದೆ, ನಮ್ಮೊಂದಿಗೆ ಬರುವಂತೆ ಜನರಿಗೂ ಕರೆ ಕೊಟ್ಟಿದ್ದರು.  ಆದರೆ ಅವರು ಈ ಯೋಜನೆಯನ್ನು ನಂತರ ಕೈಬಿಟ್ಟಿದ್ದರೂ ಕೂಡ, ಮುಂಬೈ ಪೊಲೀಸರು ಏಪ್ರಿಲ್​ 23ರಂದು ರಾಣಾ ದಂಪತಿಯನ್ನು ಅರೆಸ್ಟ್ ಮಾಡಿದ್ದರು.

ಹನುಮಾನ್ ಚಾಲೀಸಾ ವಿವಾದ; ಸಂಸದೆ ನವನೀತ್ ರಾಣಾ-ಶಾಸಕ ರವಿ ರಾಣಾಗೆ ಅಂತೂ ಸಿಕ್ತು ಜಾಮೀನು, ಕೋರ್ಟ್​​ನಿಂದ ಎಚ್ಚರಿಕೆ
ನವನೀತ್ ರಾಣಾ ಮತ್ತು ರವಿ ರಾಣಾ ದಂಪತಿ
Follow us
TV9 Web
| Updated By: Lakshmi Hegde

Updated on:May 04, 2022 | 3:08 PM

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರಿ ಹೊರಗೆ ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಘೋಷಣೆ ಮಾಡಿದಕ್ಕೆ ಬಂಧಿಸಲ್ಪಟ್ಟಿದ್ದ ಸಂಸದೆ (ಸ್ವತಂತ್ರ) ನವನೀತ್​ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯ ಇಂದು ಜಾಮೀನು ನೀಡಿದೆ. ಹೀಗೆ ಬೇಲ್​ ನೀಡುವಾಗ ಒಂದಷ್ಟು ಷರತ್ತುಗಳನ್ನು ಕೋರ್ಟ್ ವಿಧಿಸಿದೆ. ಮತ್ತೊಮ್ಮೆ ಇಂಥ ತಪ್ಪು ಮಾಡಬಾರದು ಎಂದು ಹೇಳಿರುವ ಕೋರ್ಟ್​, ಹಾಗೊಮ್ಮೆ ತಪ್ಪು ಮರುಕಳಿಸಿದ್ದೇ ಆದಲ್ಲಿ ಜಾಮೀನು ರದ್ದುಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದೆ.  ಹಾಗೇ, ತನಿಖೆಗೆ ಸಹಕರಿಸಬೇಕು. ವಿಚಾರಣೆಗೆ ಹಾಜರಾಗಬೇಕು ಎಂದೂ ಹೇಳಿದೆ. ಇನ್ನು, ದಂಪತಿಯನ್ನು ಯಾವಾಗ ವಿಚಾರಣೆಗೆ ಕರೆಸುವುದಾದರೂ ಅವರಿಗೆ 24 ಗಂಟೆಗೂ ಮೊದಲು ನೋಟಿಸ್ ಕೊಡಬೇಕು ಎಂದು ಪೊಲೀಸರಿಗೆ ತಿಳಿಸಿದೆ. ಅಷ್ಟೇ ಅಲ್ಲ, ಈ ದಂಪತಿ ಪ್ರಸ್ತುತ ವಿಚಾರವಾಗಿ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಯನ್ನೂ ನೀಡುವುಂತಿಲ್ಲ ಎಂದೂ ಹೇಳಲಾಗಿದೆ. 

ಉದ್ಧವ್ ಠಾಕ್ರೆಯ ಮನೆಯೆದುರು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಹೇಳಿದ್ದಲ್ಲದೆ, ನಮ್ಮೊಂದಿಗೆ ಬರುವಂತೆ ಜನರಿಗೂ ಕರೆ ಕೊಟ್ಟಿದ್ದರು.  ಆದರೆ ಅವರು ಈ ಯೋಜನೆಯನ್ನು ನಂತರ ಕೈಬಿಟ್ಟಿದ್ದರೂ ಕೂಡ, ಮುಂಬೈ ಪೊಲೀಸರು ಏಪ್ರಿಲ್​ 23ರಂದು ರಾಣಾ ದಂಪತಿಯನ್ನು ಅರೆಸ್ಟ್ ಮಾಡಿದ್ದರು. ಕೋಮು ಸೌಹಾರ್ದತೆ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಲ್ಲದೆ, ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಇವರ ಪರ ಕೋರ್ಟ್​​ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಅಬಾದ್​ ಪೊಂಡಾ ಮತ್ತು ರಿಜ್ವಾನ್​ ಮರ್ಚಂಟ್, ಈ ದಂಪತಿಗೆ ಸೌಹಾರ್ದತೆ ಕದಡುವ ಉದ್ದೇಶ ಇರಲಿಲ್ಲ. ಯಾವುದೇ ನಾಗರಿಕರಿಗೂ ಸರ್ಕಾರವನ್ನು ಟೀಕಿಸುವ ಹಕ್ಕಿದೆ. ಯಾರೋ ಸರ್ಕಾರದ ಆಡಳಿತವನ್ನು ಟೀಕಿಸಿದಾಕ್ಷಣ ಹಿಂಸಾಚಾರ ಉಂಟಾಗುವುದಿಲ್ಲ ಎಂದು ಹೇಳಿದ್ದರು.

ಆದರೆ ಪೊಲೀಸರು ರಾಣಾ ದಂಪತಿಗೆ ಜಾಮೀನು ನೀಡಬಾರದು ಎಂದು ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಹನುಮಾನ್​ ಚಾಲೀಸಾ ಪಠಣಕ್ಕೆ ಕರೆ ನೀಡಿದ್ದರಿಂದ ಧರ್ಮದ ಹೆಸರಲ್ಲಿ ಹಿಂಸಾಚಾರ ಉಂಟಾಗುವ ಸಾಧ್ಯತೆ ಇತ್ತು. ಮಹಾರಾಷ್ಟ್ರದ ಮಹಾ ವಿಕಾಸ್​ ಅಘಾಡಿ ಸರ್ಕಾರವನ್ನು ಪತನಗೊಳಿಸುವ ಸಲುವಾಗಿ ನಡೆಸಿದ ಹುನ್ನಾರದ ಒಂದು ಭಾಗ ಇದು. ಧರ್ಮದ ಹೆಸರಲ್ಲಿ ಹಿಂಸಾಚಾರ ಸೃಷ್ಟಿಸಿ,  ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವುದು ಇವರ ಉದ್ದೇಶವಾಗಿತ್ತು ಎಂದು ಪೊಲೀಸರು ಕೋರ್ಟ್​ಗೆ ಹೇಳಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವೀಗ ಅಂತಿಮವಾಗಿ ಜಾಮೀನು ಮಂಜೂರು ಮಾಡಿದೆ.

ರಾಣಾ ಮನೆಗೆ ಬಿಎಂಸಿ ಅಧಿಕಾರಿಗಳ ಭೇಟಿ

ಅತ್ತ ರಾಣಾ ದಂಪತಿಗೆ ಜಾಮೀನು ಸಿಕ್ಕಿದೆ. ಇತ್ತ ಬೃಹನ್​ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (BMC)  ಅಧಿಕಾರಿಗಳು ರಾಣಾ ದಂಪತಿಯ ಮನೆಗೆ ಭೇಟಿ ಕೊಟ್ಟಿದ್ದಾರೆ. ಇವರು ಮುಂಬೈನ ಖಾರ್​ ಏರಿಯಾದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಪರಿಶೀಲನೆ ನಡೆಸಲು ಅಧಿಕಾರಿಗಳು ಅಲ್ಲಿಗೆ ಹೋಗಿದ್ದಾರೆ.

ಇದನ್ನೂ ಓದಿ: Sunscreen Lotion: ಎಷ್ಟು ಗಂಟೆಗೊಮ್ಮೆ ಸನ್​ಸ್ಕ್ರೀನ್ ಲೋಷನ್ ಹಚ್ಚುತ್ತಿರಬೇಕು?; ತಜ್ಞರ ಉತ್ತರ ಇಲ್ಲಿದೆ

Published On - 1:23 pm, Wed, 4 May 22