ಮುಂಬೈನಲ್ಲಿ ಮತ್ತೆ 26/11 ಮಾದರಿಯ ಸಂಚಿನ ಶಂಕೆ: ಯಹೂದಿ ಕೇಂದ್ರಗಳ ಮೇಲೆ ಕಣ್ಣಿಟ್ಟಿದ್ದ ಯುವಕ ಅರೆಸ್ಟ್
ಮುಂಬೈನಲ್ಲಿ ಯಹೂದಿ ಧಾರ್ಮಿಕ ಸ್ಥಳಗಳ ಮೇಲೆ ಕಣ್ಗಾವಲು ನಡೆಸಿದ ಆರೋಪದ ಮೇಲೆ 20 ವರ್ಷದ ಯುವಕನನ್ನು ಬಂಧಿಸಲಾಗಿದೆ. 26/11 ಮುಂಬೈ ದಾಳಿಯ ಮಾದರಿಯ ಸಂಚಿನ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಅಂತಾರಾಷ್ಟ್ರೀಯ ಜಾಲದ ಸಂಪರ್ಕ ಪತ್ತೆ ಮಾಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಬಳಸಿಕೊಳ್ಳುವ ಶಹಜಾದ್ ಭಟ್ಟಿ ನೆಟ್‌ವರ್ಕ್ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಮುಂಬೈ, ನವೆಂಬರ್ 14: ಮುಂಬೈನಲ್ಲಿ ಯಹೂದಿ ಧಾರ್ಮಿಕ ಸ್ಥಳಗಳು ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳ ಮೇಲೆ ರಹಸ್ಯವಾಗಿ ಕಣ್ಗಾವಲು ನಡೆಸಿದ ಆರೋಪದ ಮೇಲೆ 20 ವರ್ಷದ ಯುವಕನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ನಡೆಸಿದ ತನಿಖೆಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಜಾಲದ ಸಂಪರ್ಕ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬಂಧಿತನನ್ನು ನವಿ ಮುಂಬೈನ ಐರೋಲಿಯ ನಿವಾಸಿ ಯಶ್ ಸಿಂಗ್ ಎಂದು ಗುರುತಿಸಲಾಗಿದೆ. 26/11 ಮುಂಬೈ ದಾಳಿಯ ಮಾದರಿಯಲ್ಲಿ ಯಹೂದಿ ಧಾರ್ಮಿಕ ಕೇಂದ್ರಗಳು ಸೇರಿದಂತೆ ಸೂಕ್ಷ್ಮ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಆತನಿಗೆ ವಹಿಸಲಾಗಿತ್ತು ಎಂಬುದು ತನಿಖಾ ಸಂಸ್ಥೆಗಳ ಆರೋಪ.
ಯಾವ ಸ್ಥಳಗಳ ಮೇಲೆ ಕಣ್ಗಾವಲು? ತನಿಖಾಧಿಕಾರಿಗಳ ಪ್ರಕಾರ, ಮುಂಬೈನಲ್ಲಿರುವ ಚಾಬಾದ್ ಹೌಸ್‌ಗಳು ಮತ್ತು ಸಿನಗಾಗ್‌ಗಳು ಸೇರಿದಂತೆ ಯಹೂದಿ ಧಾರ್ಮಿಕ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರೋಪಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ.
ಅಲ್ಲದೆ, ಯಹೂದಿ ಸಮುದಾಯದವರು ನಡೆಸುವ ಕಚೇರಿಗಳು ಮತ್ತು ವ್ಯಾಪಾರ ಸಂಸ್ಥೆಗಳು, ವಿದೇಶಿ ಪ್ರಜೆಗಳು ಹಾಗೂ ಯಹೂದಿ ಸಮುದಾಯದವರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳ ಮೇಲೂ ನಿಗಾ ಇಡಲು ಹೇಳಲಾಗಿತ್ತು ಎಂದು ಆರೋಪಿಸಲಾಗಿದೆ.ಈ ಸ್ಥಳಗಳಿಗೆ ಭೇಟಿ ನೀಡುವ ಜನರ ಫೋಟೋಗಳು, ವಾಹನಗಳ ವಿವರಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸುವಂತೆ ಸೂಚಿಸಲಾಗಿತ್ತು ಎಂಬುದು ಎಟಿಎಸ್ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಪಾಕಿಸ್ತಾನ- ಅಫ್ಘಾನ್ ಗಡಿಯಲ್ಲಿ ಗುಂಡಿನ ದಾಳಿ; 11 ಪಾಕ್ ಸೈನಿಕರು, 19 ಉಗ್ರರು ಸಾವು
ಟೆಲಿಗ್ರಾಮ್ ಮೂಲಕ ಕಾರ್ಯಾಚರಣೆ? ಸಾಮಾಜಿಕ ಮಾಧ್ಯಮಗಳ ಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿ ಎಟಿಎಸ್ ತನಿಖೆ ಆರಂಭಿಸಿತ್ತು. ಈ ವೇಳೆ ಟೆಲಿಗ್ರಾಮ್ ಗುಂಪೊಂದರ ಮೂಲಕ ಆರೋಪಿಗೆ ಕಣ್ಗಾವಲು ಸಂಬಂಧಿತ ಕೆಲಸಗಳನ್ನು ನೀಡಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ.ಈ ಕೆಲಸಗಳಿಗಾಗಿ ಆತನಿಗೆ ಆಗಾಗ ಹಣವನ್ನೂ ನೀಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಕೇರಳ ಪ್ರಕರಣದ ನಂಟು ತನಿಖೆಯ ವೇಳೆ ಯಶ್ ಸಿಂಗ್‌ಗೆ ಕೇರಳದ ತ್ರಿಶೂರ್ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಪರ್ಕವಿರುವುದು ಪತ್ತೆಯಾಗಿದೆ. 2025ರಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿದ್ದ ವ್ಯಕ್ತಿಯೊಬ್ಬರೊಂದಿಗೆ ಯಶ್ ಸಂಪರ್ಕ ಹೊಂದಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಈ ಮಾಹಿತಿ ಆಧರಿಸಿ ಕೇರಳ ಪೊಲೀಸರು ನವಿ ಮುಂಬೈಗೆ ಬಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸೆಳೆಯುವ ಆರೋಪ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪರಾಧ ಜಾಲಗಳು ಭಾರತದ ನಿರುದ್ಯೋಗಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಯುವಕರನ್ನು ಗುರಿಯಾಗಿಸಿಕೊಂಡಿವೆ ಎಂದು ಎಟಿಎಸ್ ಅಧಿಕಾರಿಗಳು ಆರೋಪಿಸಿದ್ದಾರೆ.
ವಿಶೇಷವಾಗಿ ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ನೆಟ್‌ವರ್ಕ್ ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಯುವಕರನ್ನು ಸಂಪರ್ಕಿಸಿ, ಹಣದ ಆಮಿಷವೊಡ್ಡಿ ಸಣ್ಣಪುಟ್ಟ ಕೆಲಸಗಳನ್ನು ನೀಡುತ್ತದೆ ಎನ್ನಲಾಗಿದೆ. ಆರಂಭದಲ್ಲಿ ಸಾಮಾನ್ಯ ಫೋಟೋ ಅಥವಾ ವಿಡಿಯೋ ಸಂಗ್ರಹಿಸುವ ಕೆಲಸ ನೀಡಲಾಗುತ್ತದೆ. ಬಳಿಕ ಸೂಕ್ಷ್ಮ ಸ್ಥಳಗಳ ಮಾಹಿತಿ ಸಂಗ್ರಹಿಸುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ
ಶಹಜಾದ್ ಭಟ್ಟಿ ನೆಟ್‌ವರ್ಕ್ ಎಂದರೇನು? – ಶಹಜಾದ್ ಭಟ್ಟಿ ಪಾಕಿಸ್ತಾನ ಮೂಲದ ಅಪರಾಧ ಜಾಲದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿ. – ಈ ಜಾಲವು ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತೀಯ ಯುವಕರನ್ನು ಸಂಪರ್ಕಿಸಿ, ಹಣದ ಆಮಿಷವೊಡ್ಡಿ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ ಎಂಬುದು ತನಿಖಾ ಸಂಸ್ಥೆಗಳ ಆರೋಪ. – 2026ರ ಸೆಪ್ಟೆಂಬರ್ 16ರಂದು ಕೇಂದ್ರ ಗೃಹ ಸಚಿವಾಲಯವು ಶಹಜಾದ್ ಭಟ್ಟಿ ನೆಟ್‌ವರ್ಕ್ ಅನ್ನು ಯುಎಪಿಎ ಕಾಯ್ದೆಯಡಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು
26/11 ದಾಳಿಯಲ್ಲಿ ಚಾಬಾದ್ ಹೌಸ್ ಏಕೆ ಪ್ರಮುಖವಾಗಿತ್ತು?
ಮುಂಬೈನ ಕೊಲಾಬಾದಲ್ಲಿರುವ ಚಾಬಾದ್ ಹೌಸ್ ಅನ್ನು ನಾರಿಮನ್ ಹೌಸ್ ಎಂದೂ ಕರೆಯುತ್ತಾರೆ. ಇದು ಯಹೂದಿ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. 2008ರ ನವೆಂಬರ್ 26ರಂದು ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರು ಈ ಕಟ್ಟಡವನ್ನೂ ಗುರಿಯಾಗಿಸಿಕೊಂಡಿದ್ದರು. ದಾಳಿಯಲ್ಲಿ ರಬ್ಬಿ ಗ್ಯಾಬ್ರಿಯಲ್ ಹೋಲ್ಟ್ಜ್‌ಬರ್ಗ್ ಮತ್ತು ಅವರ ಪತ್ನಿ ರಿವ್ಕಾ ಸೇರಿದಂತೆ ಹಲವರು ಮೃತಪಟ್ಟಿದ್ದರು. ಹೀಗಾಗಿ ಈಗ ಇದೇ ಸ್ಥಳದ ಬಗ್ಗೆ ಮತ್ತೆ ಕಣ್ಗಾವಲು ನಡೆಸಿರುವ ಆರೋಪ ಭದ್ರತಾ ಸಂಸ್ಥೆಗಳ ಗಮನ ಸೆಳೆದಿದೆ.
ಎಟಿಎಸ್ ಎಚ್ಚರಿಕೆ ಏನು? – ಅಪರಿಚಿತ ವ್ಯಕ್ತಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಆಮಿಷಗಳಿಗೆ ಮರುಳಾಗಬಾರದು. – ಹಣದ ಆಸೆಗಾಗಿ ಸೂಕ್ಷ್ಮ ಸ್ಥಳಗಳ ಫೋಟೋ ಅಥವಾ ವಿಡಿಯೋ ತೆಗೆಯಬಾರದು. – ಅಪರಿಚಿತರಿಗೆ ವಾಹನಗಳ ವಿವರ, ಜನರ ಮಾಹಿತಿ ಅಥವಾ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು. – ಅನುಮಾನಾಸ್ಪದ ಆನ್‌ಲೈನ್ ಸಂಪರ್ಕಗಳ ಬಗ್ಗೆ ಪೋಷಕರು ಮಕ್ಕಳೊಂದಿಗೆ ಮಾತನಾಡಬೇಕು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




