ಪಾಕಿಸ್ತಾನ- ಅಫ್ಘಾನ್ ಗಡಿಯಲ್ಲಿ ಗುಂಡಿನ ದಾಳಿ; 11 ಪಾಕ್ ಸೈನಿಕರು, 19 ಉಗ್ರರು ಸಾವು
ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಭಾರಿ ಪ್ರಮಾಣದ ಗುಂಡಿನ ಕಾಳಗ ನಡೆದಿದ್ದು, ಪಾಕಿಸ್ತಾನದ 11 ಸೈನಿಕರು, 19 ಪಾಕ್ ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. ಅಫ್ಘಾನ್ ಗಡಿಯ ಖೈಬರ್ ಪಂಖ್ತುಖ್ವಾ ಪ್ರಾಂತ್ಯದ ಒರಾಖ್ಜೈ ಜಿಲ್ಲೆಯಲ್ಲಿ ತಾಲಿಬಾನ್ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ದಾಳಿ ವೇಳೆ ಉಗ್ರರು, ಪಾಕ್ ಸೈನಿಕರ ನಡುವೆ ಭಾರಿ ಗುಂಡಿನ ಕಾಳಗ ನಡೆದಿದೆ. ಮೃತ ಉಗ್ರರಲ್ಲಿ ನಿಷೇಧಿತ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ಮತ್ತು ಬಲೂಚ್ ಲಿಬರೇಷನ್ ಆರ್ಮಿ ಸದಸ್ಯರು ಕೂಡ ಸೇರಿದ್ದಾರೆಂದು ಪಾಕಿಸ್ತಾನ ಮಾಹಿತಿ ನೀಡಿದೆ.

ಇಸ್ಲಮಾಬಾದ್, ಅಕ್ಟೋಬರ್ 8: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ 19 ಭಯೋತ್ಪಾದಕರು ಮತ್ತು 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಬಂಧಿತ ಹಿಂಸಾಚಾರಗಳು ಹೆಚ್ಚಳವಾಗಿದೆ. ಇದರಲ್ಲಿ ಹೆಚ್ಚಿನವು ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಟಿಟಿಪಿಯಿಂದ ನಡೆಯುತ್ತಿವೆ. ಇದು ಅಫ್ಘಾನ್ ತಾಲಿಬಾನ್‌ಗಿಂತ ಭಿನ್ನವಾಗಿದ್ದು, ಅದರೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಅಕ್ಟೋಬರ್ 7ರ ರಾತ್ರಿ “ಫಿಟ್ನಾ ಅಲ್-ಖವಾರಿಜ್” ಎಂದು ಕರೆಯಲ್ಪಡುವ ಗುಂಪಿನ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿಯ ಬಳಿಕ ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ ಜಿಲ್ಲೆಯಲ್ಲಿ ಪಾಕ್ ಸೇನೆಯಿಂದ ಕಾರ್ಯಾಚರಣೆ ನಡೆಸಲಾಯಿತು. ನಿಷೇಧಿತ ಟಿಟಿಪಿ ಭಯೋತ್ಪಾದಕ ಸಂಘಟನೆಯನ್ನು ವಿವರಿಸಲು ಫಿಟ್ನಾ ಅಲ್-ಖವಾರಿಜ್ ಎಂಬ ಪದವನ್ನು ಬಳಸಲಾಗುತ್ತದೆ.
ಈ ಕಾರ್ಯಾಚರಣೆಯ ವೇಳೆ ಮೃತಪಟ್ಟ ಪಾಕ್ ಸೈನಿಕರಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಕೂಡ ಸೇರಿದ್ದಾರೆ. ಇದೇ ವೇಳೆ 19 ಭಯೋತ್ಪಾದಕರು ಸಹ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ ಜಿಲ್ಲೆಯಲ್ಲಿ ನಡೆದ ದಾಳಿಯ ನಂತರ ಈ ಸಾವುಗಳು ಸಂಭವಿಸಿವೆ.
ಕಳೆದ ತಿಂಗಳು ಹಿಂಸಾಚಾರ ಪೀಡಿತ ಖೈಬರ್ ಪಖ್ತುನ್ಖ್ವಾದ ಮತ್ತೊಂದು ಜಿಲ್ಲೆಯಾದ ಕರಕ್‌ನಲ್ಲಿರುವ ಅಡಗುತಾಣವೊಂದರ ಮೇಲೆ ನಡೆದ ದಾಳಿಯಲ್ಲಿ 17 ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದರು. ಆ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು.
ಇದನ್ನೂ ಓದಿ: ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡಲ್ಲ: ಟ್ರಂಪ್ಗೆ ಉತ್ತರಿಸಿದ ತಾಲಿಬಾನ್; ಅಮೆರಿಕಕ್ಕೆ ಯಾಕೆ ಮುಖ್ಯ ಬಗರಮ್ ವಾಯುನೆಲೆ?
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಟಿಟಿಪಿಯ ಚಟುವಟಿಕೆಗಳು ಹೆಚ್ಚಾಗಿವೆ. ಅದರ ಅನೇಕ ನಾಯಕರು ಮತ್ತು ಹೋರಾಟಗಾರರು ಅಂದಿನಿಂದ ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಬಂಧಿತ ಹಿಂಸಾಚಾರವು ಅಂದಾಜು ಶೇ. 46ರಷ್ಟು ಹೆಚ್ಚಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




