ಚುನಾವಣೆಯಲ್ಲಿ ಸೋತರೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿದ ಇಬ್ಬರೇ ಇಬ್ಬರು ವ್ಯಕ್ತಿಗಳು

|

Updated on: Jun 10, 2024 | 12:04 PM

L Murugan and Ravneet Singh Buttu included in Modi 3.0 cabinet: ನರೇಂದ್ರ ಮೋದಿ ಸಂಪುಟದಲ್ಲಿ 72 ಮಂದಿ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಇವರ ಪೈಕಿ ಚುನಾವಣೆಯಲ್ಲಿ ಸೋತ ಇಬ್ಬರಿದ್ದಾರೆ. ಪಂಜಾಬ್​ನ ರವನೀತ್ ಸಿಂಗ್ ಬಿಟ್ಟು ಮತ್ತು ತಮಿಳುನಾಡಿನ ಎಲ್ ಮುರುಗನ್ ಅವರ ಈ ಇಬ್ಬರು ಭಾಗ್ಯವಂತರು. ಕುತೂಹಲವೆಂದರೆ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಸೊನ್ನೆ ಸುತ್ತಿದೆ. ಆದರೂ ಕೂಡ ಸಂಪುಟದಲ್ಲಿ ಈ ರಾಜ್ಯಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಬಿಜೆಪಿಗೆ ಗೆಲ್ಲಲು ಕಷ್ಟವಾಗಿರುವ ರಾಜ್ಯಗಳಿಗೆ ಸಂಪುಟದಲ್ಲಿ ಪ್ರಾಮುಖ್ಯತೆ ನೀಡಲಾಗಿರುವುದು ಗಮನಾರ್ಹದ ಸಂಗತಿ.

ಚುನಾವಣೆಯಲ್ಲಿ ಸೋತರೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿದ ಇಬ್ಬರೇ ಇಬ್ಬರು ವ್ಯಕ್ತಿಗಳು
ಎಲ್ ಮುರುಗನ್, ರವನೀತ್ ಸಿಂಗ್ ಬಿಟ್ಟು
Follow us on

ನವದೆಹಲಿ, ಜೂನ್ 10: ಮೋದಿ ನೇತೃತ್ವದ ಎನ್​ಡಿಎ 3.0 ಸರ್ಕಾರ (Modi govt) ಮೈತ್ರಿ ಸಂಕಷ್ಟಕ್ಕೆ ಸಿಲುಕಿ ವಿವಿಧ ಬೇಡಿಕೆಗಳಿಗೆ ಬಗ್ಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಪಕ್ಷಗಳ ಬಲಾಬಲಕ್ಕೆ ತಕ್ಕಂತೆ ಸ್ಥಾನ ಹಂಚಿಕೆ ಆಗಿದೆ. ಚುನಾವಣೆಯಲ್ಲಿ ಸೋತವರಲ್ಲಿ ಬಹುತೇಕ ಯಾರಿಗೂ ಮೋದಿಯ ಹೊಸ ಕ್ಯಾಬಿನೆಟ್​ನಲ್ಲಿ ಸ್ಥಾನ ಸಿಕ್ಕಿಲ್ಲ. ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್ ಮೊದಲಾದವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರ ಪೈಕಿ 17 ಜನರು ಈ ಬಾರಿ ಸೋತಿದ್ದಾರೆ. ಇವರಲ್ಲಿ 16 ಮಂದಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಒಟ್ಟಾರೆ, ಚುನಾವಣೆಯಲ್ಲಿ ಸೋತವರ ಪೈಕಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನದ ಭಾಗ್ಯ ಲಭಿಸಿದೆ. ಕುತೂಹಲವೆಂದರೆ ಅವರಿಬ್ಬರು ದೊಡ್ಡ ಹೆಸರಿನವರಲ್ಲ ಎಂಬುದು. ತಮಿಳುನಾಡಿನ ಎಲ್ ಮುರುಗನ್ ಮತ್ತು ಪಂಜಾಬ್​ನ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರಿಗೆ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ.

ಬಿಟ್ಟು ಮತ್ತು ಮುರುಗನ್ ಕೈ ಹಿಡಿಯುವುದರ ಹಿಂದೆ ಬಿಜೆಪಿ ಮಾಸ್ಟರ್​ಪ್ಲಾನ್?

ರವನೀತ್ ಸಿಂಗ್ ಬಿಟ್ಟು ಅವರು ಪಂಜಾಬ್​ನಲ್ಲಿ ಮೂರು ಬಾರಿ ಸಂಸದರಾದವರು. ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆಯಷ್ಟೇ ಅವರು ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದಿದ್ದರು. 48 ವರ್ಷದ ರವ್ನೀತ್ ಬಿಟ್ಟು ಅಜ್ಜ ಬೇಯಾಂತ್ ಸಿಂಗ್ ಪಂಜಾಬ್​ನ ಮಾಜಿ ಸಿಎಂ. ಪಂಜಾಬ್​ನಲ್ಲಿ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಖಾಲಿಸ್ತಾನೀ ಭಯೋತ್ಪಾದನೆ ಸಮಸ್ಯೆಯನ್ನು ಹತ್ತಿಕ್ಕಿದ ಶ್ರೇಯಸ್ಸು ಬೇಯಾಂತ್ ಸಿಂಗ್​ಗೆ ಸಲ್ಲಬೇಕು. 1995ರಲ್ಲಿ ಅವರು ಖಲಿಸ್ತಾನಿಗಳ ಗುಂಡಿಗೆ ಬಲಿಯಾಗಿ ಹೋದರು.

ಇದನ್ನೂ ಓದಿ: ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಸಚಿವ: ಕಿಂಜರಾಪು ರಾಮಮೋಹನ್ ನಾಯ್ಡು ದಾಖಲೆ

ರವನೀತ್ ಸಿಂಗ್ ಬಿಟ್ಟು ಕಾಂಗ್ರೆಸ್​ನಿಂದ ಮೂರು ಬಾರಿ ಗೆದ್ದರೂ ಬಿಜೆಪಿ ಬಂದು ಸೋತು ಹೋದರು. ಆದರೂ ಕೂಡ ಮೋದಿ ಸರ್ಕಾರ ರವ್ನೀತ್​ಗೆ ಸಚಿವ ಸ್ಥಾನ ಕೊಡಲು ನಿರ್ಧರಿಸಿದೆ. ಪಂಜಾಬ್​ನಲ್ಲಿ ಬಿಜೆಪಿ ಬೆಳವಣಿಗೆಗೆ ರವನೀತ್ ಸಿಂಗ್ ಅವರಿಂದ ಸಹಕಾರಿ ಆಗಬಹುದು ಎನ್ನುವ ನಂಬಿಕೆ ಬಿಜೆಪಿ ವರಿಷ್ಠರಲ್ಲಿ ಇದೆ.

ತಮಿಳುನಾಡಿನ ಎಲ್ ಮುರುಗನ್​ಗೆ ಸಚಿವ ಸ್ಥಾನ

ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷರಾದ ಎಲ್ ಮುರುಗನ್ ಲೋಕಸಭಾ ಚುನಾವಣೆಯಲ್ಲಿ ನೀಲಗಿರೀಸ್ ಕ್ಷೇತ್ರದಲ್ಲಿ ಡಿಎಂಕೆಗೆ ಅಲ್ಪ ಮತಗಳ ಅಂತರದಿಂದ ಶರಣಾಗಿದ್ದರು. ಈವರೆಗೆ ಅವರು ಹಲವು ಚುನಾವಣೆಗಳನ್ನು ಎದುರಿಸಿದ್ದಾರೆ. ಒಮ್ಮೆಯೂ ಗೆದ್ದಿಲ್ಲ. ಆದರೂ ಕೂಡ ಅವರು ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹಿಂದಿನ ಸರ್ಕಾರದಲ್ಲೂ ಅವರು ಮಂತ್ರಿಯಾಗಿದ್ದರು.

ಇದನ್ನೂ ಓದಿ: ನರೇಂದ್ರ ಮೋದಿ ಹೊಸ ಕ್ಯಾಬಿನೆಟ್; ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಸಚಿವರ ಪಟ್ಟಿ ಇಲ್ಲಿದೆ

ಸದ್ಯ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಸಂಸದರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಸೋತರೂ ಎಲ್ ಮುರುಗನ್ ಅವರಿಗೆ ಸಚಿವ ಸ್ಥಾನ ಕೊಡಲು ಬಿಜೆಪಿ ತಂತ್ರ ಇದೆ. ಮುರುಗನ್ ಸಂಘಟನಾ ಚತುರ. ದಲಿತ ಮುಖಂಡ. ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯವು ಮುರುಗನ್ ಮತ್ತು ಅಣ್ಣಾಮಲೈ ಕೈಯಲ್ಲಿ ಇದೆ ಎಂಬುದು ವರಿಷ್ಠರ ನಂಬಿಕೆ. ದಲಿತ ನಾಯಕರಾಗಿರುವ ಮುರುಗನ್ ಅವರು ಸಂಸತ್​ನಲ್ಲಿ ತಮಿಳುನಾಡನ್ನು ಪ್ರತಿನಿಧಿಸಲಿದ್ದಾರೆ. ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಗ್ರೌಂಡ್ ಲೆವೆಲ್​ನಲ್ಲಿ ಸಂಘಟನೆ ಕಟ್ಟುವ ಕೆಲಸ ಮುಂದುವರಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Mon, 10 June 24