ದೆಹಲಿ: 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಯುವತಿ (Muslim) ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳಲು ಸಮರ್ಥಳು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ (Punjab and Haryana High Court) ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ (Justice Jasjit Singh Bedi) ಅವರ ಪೀಠವು ಮುಸ್ಲಿಂ ದಂಪತಿಯ ರಕ್ಷಣೆ ಅರ್ಜಿಯನ್ನು ವಿಲೇವಾರಿ ಮಾಡುವಾಗ ಈ ಆದೇಶವನ್ನು ನೀಡಿದೆ. ಈ ಪ್ರಕರಣದಲ್ಲಿ 21 ವರ್ಷದ ಯುವಕ ಮತ್ತು 16 ವರ್ಷದ ಯುವತಿ ಕುಟುಂಬ ಸದಸ್ಯರಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ದಂಪತಿ ಈ ಪ್ರಕರಣದಲ್ಲಿ ಅರ್ಜಿದಾರರಾಗಿದ್ದಾರೆ. ಅರ್ಜಿದಾರರ ಪ್ರಕಾರ ಅವರು ಕೆಲವು ಕಾಲಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗಲು ನಿರ್ಧರಿಸಿದರು. ಅವರ ವಿವಾಹವನ್ನು ಜೂನ್ 8, 2022 ರಂದು ಮುಸ್ಲಿಂ ವಿಧಿ ಮತ್ತು ವಿಧಿವಿಧಾನಗಳ ಪ್ರಕಾರ ನೆರವೇರಿಸಲಾಯಿತು. ಅರ್ಜಿದಾರ ದಂಪತಿಯ ವಕೀಲರು, ಮುಸ್ಲಿಂ ಕಾನೂನಿನಲ್ಲಿ ಹೆಣ್ಣು ಋತುಮತಿಯಾಗುವುದು ಮತ್ತು ಪ್ರಾಪ್ತೆ ಒಂದೇ ಆಗಿರುತ್ತದೆ. ಹುಡುಗಿ 15 ವರ್ಷದಲ್ಲಿ ಋತುಮತಿಯಾಗುತ್ತಾಳೆ. ಪ್ರೌಢಾವಸ್ಥೆಗೆ ಬಂದ ಮುಸ್ಲಿಂ ಹುಡುಗ ಅಥವಾ ಮುಸ್ಲಿಂ ಹುಡುಗಿ ಅವರು ಇಷ್ಟಪಡುವ ಯಾರನ್ನಾದರೂ ಮದುವೆಯಾಗಲು ಸ್ವಾತಂತ್ರ್ಯವಿದೆ . ಇದರಲ್ಲಿ ಪೋಷಕರಿಗೆ ಮಧ್ಯಪ್ರವೇಶಿಸುವ ಹಕ್ಕಿಲ್ಲ ಎಂದು ಅವರು ವಾದಿಸಿದರು. ಅಲ್ಲದೆ, ತಮ್ಮ ಜೀವ ಬೆದರಿಕೆ ಇದೆ ಎಂದು ದಂಪತಿ ಪಠಾಣ್‌ಕೋಟ್‌ನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಗೆ ದೂರು ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ ಎಂದು ಕಾನೂನು ಸ್ಪಷ್ಟವಾಗಿದೆ. ಸರ್ ದಿನ್‌ಶಾ ಫರ್ದುಂಜಿ ಮುಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಅರ್ಜಿದಾರರ ಸಂಖ್ಯೆ 2 ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಪ್ರವೇಶಿಸಲು ಸಮರ್ಥರಾಗಿದ್ದಾರೆ ಎಂದು ನ್ಯಾಯಮೂರ್ತಿ ಬೇಡಿ ಹೇಳಿದ್ದಾರೆ.
“ಅರ್ಜಿದಾರರ ಆತಂಕ ಬಗ್ಗೆ ನ್ಯಾಯಾಲಯ ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ಪೀಠವು, ಅರ್ಜಿದಾರರ ಪ್ರಾತಿನಿಧ್ಯವನ್ನು ನಿರ್ಧರಿಸಲು ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಎಸ್‌ಎಸ್‌ಪಿ, ಪಠಾಣ್‌ಕೋಟ್‌ಗೆ ನಿರ್ದೇಶನದೊಂದಿಗೆ ಅರ್ಜಿಯನ್ನು ವಿಲೇವಾರಿ ಮಾಡಿದೆ. ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿರುವುದರಿಂದ, ಅವರು ಭಾರತದ ಸಂವಿಧಾನದಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sun, 19 June 22