ಉತ್ತರ ಪ್ರದೇಶ: ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾಗಿದ್ದ ಯುವಕ ಪೊಲೀಸ್ ಠಾಣೆಯೊಳಗೆ ಶವವಾಗಿ ಪತ್ತೆ

ಉತ್ತರ ಪ್ರದೇಶ: ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾಗಿದ್ದ ಯುವಕ ಪೊಲೀಸ್ ಠಾಣೆಯೊಳಗೆ ಶವವಾಗಿ ಪತ್ತೆ
ಪ್ರಾತಿನಿಧಿಕ ಚಿತ್ರ

Uttar Pradesh ಪೊಲೀಸರ ಪ್ರಕಾರ ಅಲ್ತಾಫ್ ಕೂಲಿ ಕೆಲಸ ಮಾಡುತ್ತಿದ್ದ ಹಿಂದೂ ಕುಟುಂಬದ ಹುಡುಗಿ ಕಾಣೆಯಾಗಿದ್ದಾಳೆ. ಆಕೆಯ ತಂದೆ ಅಲ್ತಾಫ್ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು 366 (ಅಪಹರಣ, ಅಪಹರಣ ಅಥವಾ ಮಹಿಳೆಯನ್ನು ಮದುವೆಗೆ ಒತ್ತಾಯಿಸಲು ಪ್ರೇರೇಪಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

TV9kannada Web Team

| Edited By: Rashmi Kallakatta

Nov 10, 2021 | 2:52 PM

ಕಾಸ್ಗಂಜ್ (ಉತ್ತರಪ್ರದೇಶ): ಉತ್ತರ ಪ್ರದೇಶದ (Uttar Pradesh) ಕಾಸ್ಗಂಜ್ (Kasganj )ಜಿಲ್ಲೆಯ ಪೊಲೀಸ್ ಠಾಣೆಯೊಳಗೆ 22 ವರ್ಷದ ಮುಸ್ಲಿಂ ಯುವಕ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾನೆ. ಅಪ್ರಾಪ್ತ ಹಿಂದೂ ಬಾಲಕಿಯ ಪರಾರಿ ಪ್ರಕರಣದಲ್ಲಿ ಕೂಲಿ ಕಾರ್ಮಿಕ ಅಲ್ತಾಫ್‌ನನ್ನು(Altaf) ವಿಚಾರಣೆಗಾಗಿ ಕೊತ್ವಾಲಿ ಪೊಲೀಸ್ ಠಾಣೆಗೆ (Kotwali police station) ಕರೆತರಲಾಗಿತ್ತು. ಜಿಲ್ಲೆಯ ನಾಗ್ಲಾ ಸೈಯದ್ ನಿವಾಸಿ ಅಲ್ತಾಫ್ ಶವ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  ಪ್ರಕರಣದ ಕುರಿತು ಪೊಲೀಸರು ವಿಸ್ತೃತ ವಿಚಾರಣೆ ಆರಂಭಿಸಿದ್ದಾರೆ. ಕಾಸ್ಗಂಜ್ ಪೊಲೀಸ್ ಅಧೀಕ್ಷಕ ಬೊಟ್ರೆ ರೋಹನ್ ಪ್ರಮೋದ್ (Botre Rohan Pramod) ಅವರು ಎಸ್‌ಎಚ್‌ಒ ವೀರೇಂದ್ರ ಸಿಂಗ್ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಇತರ ನಾಲ್ವರು ಪೊಲೀಸರ ಪೈಕಿ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳಾಗಿದ್ದಾರೆ. ಅಲ್ತಾಫ್ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಆತನ ಕುಟುಂಬದವರು ಮಂಗಳವಾರ ಶವಪರೀಕ್ಷೆ ನಡೆಸುತ್ತಿದ್ದ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರೆಂದು ಕಂಡುಬಂದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ನಂತರ ಸಮಸ್ಯೆಯನ್ನು ಬಗೆಹರಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೊತ್ವಾಲಿ ಪೊಲೀಸ್ ಠಾಣೆಯ ಕಾರ್ಯ ನಿರ್ವಾಹಕ ಎಸ್‌ಎಚ್‌ಒ ರಮೇಶ್ ಪ್ರಸಾದ್ ಶವಪರೀಕ್ಷೆ ವರದಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಅಲ್ತಾಫ್ ಕೂಲಿ ಕೆಲಸ ಮಾಡುತ್ತಿದ್ದ ಹಿಂದೂ ಕುಟುಂಬದ ಹುಡುಗಿ ಕಾಣೆಯಾಗಿದ್ದಾಳೆ. ಆಕೆಯ ತಂದೆ ಅಲ್ತಾಫ್ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು 366 (ಅಪಹರಣ, ಅಪಹರಣ ಅಥವಾ ಮಹಿಳೆಯನ್ನು ಮದುವೆಗೆ ಒತ್ತಾಯಿಸಲು ಪ್ರೇರೇಪಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅಲ್ತಾಫ್‌ನನ್ನು ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಯಲಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ. ವಿಚಾರಣೆ ವೇಳೆ ಶೌಚಾಲಯಕ್ಕೆ ಹೋಗುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಪೊಲೀಸ್ ಠಾಣೆಯ ಲಾಕ್‌ಅಪ್‌ನಲ್ಲಿರುವ ಶೌಚಾಲಯಕ್ಕೆ ಅವರನ್ನು ಕಳುಹಿಸಲಾಯಿತು. ಎಷ್ಟೋ ಹೊತ್ತಾದರೂ ಅಲ್ತಾಫ್ ಹಿಂತಿರುಗದಿದ್ದಾಗ ಪೊಲೀಸರು ಒಳಗೆ ಹೋಗಿ ನೋಡಿದಾಗ ಜಾಕೆಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಕಂಡು ಬಂದಿದೆ. ಅಲ್ತಾಫ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೊಲೀಸರು ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಅಲ್ತಾಫ್ ಸಾವಿನ ಕುರಿತು ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ರಮೇಶ್ ಪ್ರಸಾದ್ ಹೇಳಿದ್ದಾರೆ.

ಸೋಮವಾರ ಸಂಜೆ ಪೊಲೀಸ್ ತಂಡವೊಂದು ಆತನ ಮನೆಗೆ ಬಂದು ಮಗನನ್ನು ವಿಚಾರಣೆಗೆ ಕಳುಹಿಸುವಂತೆ ಕೇಳಿಕೊಂಡಿತ್ತು ಎಂದು ಅಲ್ತಾಫ್ ತಂದೆ ಚಾಂದ್ ಮಿಯಾ ಹೇಳಿದ್ದಾರೆ. “ಪ್ರಕರಣದಲ್ಲಿ ನನ್ನ ಮಗನ ಪಾತ್ರವನ್ನು ಅವರು ಶಂಕಿಸಿದ್ದಾರೆ ಮತ್ತು ಅವನನ್ನು ವಿಚಾರಣೆ ಮಾಡಲ ಬಯಸಿದ್ದಾರೆ ಎಂದು ಪೊಲೀಸರು ನನಗೆ ಹೇಳಿದರು. ನನ್ನ ಮನೆಗೆ ಬಂದ ಪೊಲೀಸರಿಗೆ ನನ್ನ ಮಗನನ್ನು ಒಪ್ಪಿಸಿದೆ. ನಾನು ಪೊಲೀಸ್ ಔಟ್‌ಪೋಸ್ಟ್‌ಗೆ ಹೋದಾಗ, ಪೊಲೀಸರು ನನ್ನನ್ನು ಮರಳುವಂತೆ ಹೇಳಿದರು. 24 ಗಂಟೆಗಳ ನಂತರ ನನ್ನ ಮಗ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ನನ್ನ ಮಗನನ್ನು ನೇಣು ಹಾಕಿದ್ದಾರೆ ಎಂದು ನಾನು ಹೇಳುತ್ತೇನೆ, ”ಎಂದು ಚಾಂದ್ ಮಿಯಾ ಹೇಳಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಕುರಿತು ಭದ್ರತಾ ಸಂವಾದ: ಸಾಮೂಹಿಕ ಭದ್ರತೆ ಹೆಚ್ಚಿಸಲು ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದ ಅಜಿತ್ ದೋವಲ್

Follow us on

Related Stories

Most Read Stories

Click on your DTH Provider to Add TV9 Kannada