
ನವದೆಹಲಿ, ಡಿಸೆಂಬರ್ 28: 2017ರ ಉನ್ನಾವ್ (Unnao Case) ಅತ್ಯಾಚಾರ ಪ್ರಕರಣದ ಆರೋಪಿ ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಅತ್ಯಾಚಾರ ಸಂತ್ರಸ್ತೆ ತನ್ನ ಮಕ್ಕಳು ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ನೀಡುವ ಬಗ್ಗೆ ನಂಬಿಕೆ ಇದೆ. ನಾನು ಪ್ರತಿಯೊಬ್ಬ ಮಹಿಳೆಯ ಪರವಾಗಿಯೂ ಧ್ವನಿ ಎತ್ತುತ್ತಿದ್ದೇನೆ. ಸಿಬಿಐ ಮೊದಲೇ ಕ್ರಮ ಕೈಗೊಂಡಿದ್ದರೆ ನನಗೆ ನ್ಯಾಯ ಸಿಗುತ್ತಿತ್ತು ಮತ್ತು ಅವರ ಜಾಮೀನು ತಿರಸ್ಕರಿಸಲ್ಪಡುತ್ತಿತ್ತು ಎಂದು ಆ ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ, ಕಾರ್ಯಕರ್ತರಿಂದ ನ್ಯಾಯಾಲಯದೆದುರು ಪ್ರತಿಭಟನೆ
“ನನ್ನ ತಂದೆಯನ್ನು ಕೊಲ್ಲಲಾಯಿತು. ನನ್ನ ಕುಟುಂಬದ ಸದಸ್ಯರನ್ನು ಕೊಲ್ಲಲಾಯಿತು. ನನ್ನ ಕುಟುಂಬ ಮತ್ತು ಸಾಕ್ಷಿಗಳಿಗೆ ಭದ್ರತೆಯಿಲ್ಲ. ನನ್ನ ಪತಿ ಕೆಲಸ ಕಳೆದುಕೊಂಡರು. ನನ್ನ ಮಕ್ಕಳು ಮನೆಯಲ್ಲಿ ಅಸುರಕ್ಷಿತರಾಗಿದ್ದಾರೆ” ಎಂದು ಆಕೆ ಆರೋಪಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ಡಿಸೆಂಬರ್ 29ರಂದು ಈ ವಿಷಯದ ವಿಚಾರಣೆ ನಡೆಸಲಿದೆ. ಕುಲದೀಪ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಅವರ ಮೇಲ್ಮನವಿ ವಿಚಾರಣೆಯಲ್ಲಿರುವಾಗ ಅವರಿಗೆ ಜಾಮೀನು ನೀಡುವ ನಿರ್ಧಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಳೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ