ವರುಣ್ ಗಾಂಧಿಯವರ ಸಿದ್ಧಾಂತ ಬೇರೆ, ಅದನ್ನು ಒಪ್ಪಲಾರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2023 | 4:30 PM

ನನ್ನ ಸಿದ್ಧಾಂತವು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ನಾನು ಆರ್‌ಎಸ್‌ಎಸ್ ಕಚೇರಿಗೆ ಹೋಗಲು ಸಾಧ್ಯವಿಲ್ಲ, ಅದಕ್ಕೂ ಮೊದಲು ನನ್ನ ತಲೆಯನ್ನು ಕತ್ತರಿಸಬೇಕಾಗುತ್ತದೆ. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ, ವರುಣ್ ಇನ್ನೊಂದು ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ ಎಂದ ರಾಹುಲ್ ಗಾಂಧಿ

ವರುಣ್ ಗಾಂಧಿಯವರ ಸಿದ್ಧಾಂತ ಬೇರೆ, ಅದನ್ನು ಒಪ್ಪಲಾರೆ: ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ
ವರುಣ್ ಗಾಂಧಿ-ರಾಹುಲ್ ಗಾಂಧಿ
Follow us on

ತಮ್ಮ ಸಿದ್ಧಾಂತ ಬಿಜೆಪಿ ನಾಯಕ ವರುಣ್ ಗಾಂಧಿಯವರ (Varun Gandhi) ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ (Bharat Jodo Yatra)ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದಾಗ ಈ ರೀತಿ ಹೇಳಿದ್ದಾರೆ. ತಮ್ಮ ಚಿಕ್ಕಪ್ಪನ ಮಗ ಲೋಕಸಭಾ ಸಂಸದ ವರುಣ್ ಗಾಂಧಿ ಬಗ್ಗೆ ಮಾತನಾಡಿದ ರಾಹುಲ್, ನನ್ನ ಸಿದ್ಧಾಂತವು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ನಾನು ಆರ್‌ಎಸ್‌ಎಸ್ ಕಚೇರಿಗೆ ಹೋಗಲ್ಲ, ಅದಕ್ಕೂ ಮೊದಲು ನನ್ನ ತಲೆಯನ್ನು ಕತ್ತರಿಸಬೇಕಾಗುತ್ತದೆ. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ, ವರುಣ್ ಇನ್ನೊಂದು ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಅವನು ಒಪ್ಪಿಕೊಂಡಿರುವ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ರಾಹುಲ್.ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿಯ ವಿಡಿಯೊವನ್ನು ಎಎನ್ಐ ಟ್ವೀಟ್ ಮಾಡಿದೆ.


ವರುಣ್ ಗಾಂಧಿ ಭಾರತ್ ಜೋಡೋ ಯಾತ್ರೆ ಸೇರುವ ಬಗ್ಗೆ ಊಹಾಪೋಹಗಳು ಇದ್ದವು. ವರುಣ್ ತಮ್ಮ ಟ್ವೀಟ್‌ಗಳು, ಪತ್ರಿಕೆಗಳ ತುಣುಕುಗಳು, ಸಾರ್ವಜನಿಕ ಮತ್ತು ಸಂಸತ್ತಿನ ಭಾಷಣಗಳ ಮೂಲಕ ಜನ-ಕೇಂದ್ರಿತ ಸಮಸ್ಯೆಗಳ ಬಗ್ಗೆ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಹಲವು ಬಿಜೆಪಿಗೆ ಹೊಂದಿಕೆಯಾಗುವುದಿಲ್ಲ.

ಇದು ಕೇಂದ್ರ ಸರ್ಕಾರಕ್ಕೆ ಅಸಮಾಧಾನ ಮತ್ತು ಮುಜುಗರಕ್ಕೆ ಕಾರಣವಾಗಿದ್ದು, ಬಿಜೆಪಿ ವಿರುದ್ಧದ ದಾಳಿಯನ್ನು ತೀಕ್ಷ್ಣಗೊಳಿಸಲು ಪ್ರತಿಪಕ್ಷಗಳಿಗೆ ಸುಲಭವಾಗಿದೆ. ಮೂರು ಬಾರಿ ಸಂಸದರಾಗಿರುವ ವರುಣ್ “ಪ್ರತಿದಿನ ವೈಯಕ್ತಿಕ ಅಭಿಪ್ರಾಯಗಳನ್ನು ನೀಡಲು ಇಷ್ಟಪಡುತ್ತಾರೆ” ಎಂದು ಹೇಳುವ ಮೂಲಕ ಬಿಜೆಪಿ ಈ ಟೀಕೆಗಳನ್ನು ತಳ್ಳಿಹಾಕಲು ಪ್ರಯತ್ನಿಸಿದೆ.

ವರುಣ್ ಮತ್ತು ಅವರ ತಾಯಿ, ಉತ್ತರ ಪ್ರದೇಶದ ಬಿಜೆಪಿ ಸಂಸದೆ ಮತ್ತು ಪಕ್ಷದ ಹಿರಿಯ ನಾಯಕಿ ಮೇನಕಾ ಗಾಂಧಿ, ತಮ್ಮ ಟ್ವಿಟರ್ ಬಯೋದಲ್ಲಿ ಬಿಜೆಪಿ ಎಂದು ಪಕ್ಷದ ಹೆಸರನ್ನು ಬಳಸಿಲ್ಲ. ಇಬ್ಬರೂ ಪ್ರಧಾನಿ ಮೋದಿಯವರ ಮಂತ್ರಿ ಮಂಡಳಿ ಅಥವಾ ಯಾವುದೇ ಪ್ರಮುಖ ಬಿಜೆಪಿ ಸಮಿತಿಯ ಭಾಗವಾಗಿಲ್ಲ. ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿರಲಿಲ್ಲ.

ಇದನ್ನೂ ಓದಿ: Tejasvi surya: ವಿಮಾನದ ಎಮೆರ್ಜೆನ್ಸಿ ಎಕ್ಸಿಟ್​ ಓಪನ್ ಮಾಡಿದ ಸಂಸದ ತೇಜಸ್ವಿ ಸೂರ್ಯ, ಇಂಡಿಗೋ ವಿಮಾನ 2 ತಾಸು ತಡ

ಯಾವುದೇ ಪುನರ್ಮಿಲನಕ್ಕಾಗಿ, ವರುಣ್ ಮೊದಲು ಅಧಿಕೃತವಾಗಿ ಬಿಜೆಪಿಯನ್ನು ತೊರೆಯಬೇಕು. ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತವನ್ನು ಸಾರ್ವಜನಿಕವಾಗಿ ಖಂಡಿಸಬೇಕು ಎಂಬುದು ರಾಹುಲ್ ಗಾಂಧಿ ಹೇಳಿರುವ ಮಾತಿನ ಅರ್ಥವಾಗಿರಬಹುದು ಎಂದು ಹೇಳಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Tue, 17 January 23