ನವದೆಹಲಿ: ಹಳ್ಳಿಗಳಲ್ಲಿ ಉತ್ತಮ ಆಡಳಿತವನ್ನು ನೀಡುವ ಧ್ಯೇಯವಾಕ್ಯದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಡಿಸೆಂಬರ್ 20ರಿಂದ ರಾಜ್ಯಗಳ ಜೊತೆಗೆ ರಾಷ್ಟ್ರವ್ಯಾಪಿ ‘ಉತ್ತಮ ಆಡಳಿತ ಸಪ್ತಾಹ’ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ದೇಶದಾದ್ಯಂತ ಬಾಕಿ ಉಳಿದಿರುವ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ವಿಲೇವಾರಿ ಮಾಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ. ಎಲ್ಲಾ ರಾಜ್ಯಗಳು ಈ ಅಭಿಯಾನದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಉದ್ದೇಶಕ್ಕಾಗಿ ರಚಿಸಲಾದ ಕೇಂದ್ರ ಪೋರ್ಟಲ್ ಮೂಲಕ ಸರ್ಕಾರವು ಈ ಅಭಿಯಾನದ ಮೇಲ್ವಿಚಾರಣೆ ಮಾಡುತ್ತದೆ. ಜಿಲ್ಲಾಧಿಕಾರಿಗಳು ತಹಸಿಲ್‌ಗಳಿಗೆ ಭೇಟಿ ನೀಡಿ ಗ್ರಾಮ ಮಟ್ಟದವರೆಗೆ ಅಭಿಯಾನದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ. ಡಿಸೆಂಬರ್ 25ರಂದು ‘ಗುಡ್ ಗವರ್ನೆನ್ಸ್ ಇಂಡೆಕ್ಸ್’ ಕೂಡ ಬಿಡುಗಡೆಯಾಗಲಿದೆ.
ಆರು ದಿನಗಳ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು ಹರಿಯಾಣ, ಒಡಿಶಾ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಅಭಿಯಾನದ ಜೊತೆ ಮುಖ್ಯವಾಗಿ ಗುರುತಿಸಿಕೊಳ್ಳಲಿವೆ. ಕೇಂದ್ರ ಸರ್ಕಾರ ಈ ವರ್ಷದ ಆರಂಭದಲ್ಲಿ, ಕೇಂದ್ರ ಮಟ್ಟದಲ್ಲಿ 3 ಲಕ್ಷಕ್ಕೂ ಹೆಚ್ಚು ಬಾಕಿ ಇರುವ ನಾಗರಿಕರ ಕುಂದುಕೊರತೆಗಳನ್ನು ತೆರವುಗೊಳಿಸಲು ತನ್ನದೇ ಆದ ಅಭಿಯಾನವನ್ನು ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಡಿ. 25ರಂದು ‘ಉತ್ತಮ ಆಡಳಿತ ದಿನ’ ಎಂದು ಆಚರಿಸಲಾಗುವುದು. ‘ಉತ್ತಮ ಆಡಳಿತ ಸಪ್ತಾಹ’ದ ಸಮಾರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರುವರು. ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಯುಪಿ+ಯೋಗಿ=ಉಪಯೋಗಿ; ಗಂಗಾ ಎಕ್ಸ್ಪ್ರೆಸ್ ವೇ ಉದ್ಘಾಟಿಸಿ ಯೋಗಿ ಸರ್ಕಾರವನ್ನು ಹೊಗಳಿದ ಪ್ರಧಾನಿ ಮೋದಿ, ವಿರೋಧಿಗಳಿಗೆ ತಿರುಗೇಟು