ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ನಿಗದಿಯಾಗಿದೆ. ನಾಳೆ (ಜೂನ್ 7) ಸಂಜೆ 5.30ಕ್ಕೆ ಸಂಪುಟ ಪುನಾರಚನೆ ಪ್ರಕ್ರಿಯೆ ಆರಂಭವಾಗಲಿದೆ. ಸಂಜೆ 5.30ರಿಂದ 6 ಗಂಟೆಯವರೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಬಾರಿಯ ಸಂಪುಟ ವಿಸ್ತರಣೆ ನಂತರ ಇದು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತಿಹೆಚ್ಚು ಯುವಜನರನ್ನು ಹೊಂದಿರುವ ಸಂಪುಟವಾಗಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸಂಪುಟ ಸದಸ್ಯರ ಸರಾಸರಿ ವಯಸ್ಸು ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಎನಿಸಲಿದೆ. ಸದಸ್ಯರ ಸರಾಸರಿ ವಿದ್ಯಾರ್ಹತೆಯು ಹೆಚ್ಚಾಗುತ್ತದೆ. ಪಿಎಚ್ಡಿ, ಎಂಬಿಎ, ಸ್ನಾತಕೋತ್ತರ ಪದವಿಧರರು ಮತ್ತು ವೃತ್ತಿಪರರು ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಗಳು ವ್ಯಕ್ತವಾಗಿವೆ.
ಪ್ರತಿ ರಾಜ್ಯ ಮತ್ತು ಹಲವು ರಾಜ್ಯಗಳಲ್ಲಿ ಕೆಲ ನಿರ್ದಿಷ್ಟ ಪ್ರಾದೇಶಿಕ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಸಂಪುಟಕ್ಕೆ ಸಚಿವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ 24 ಸಚಿವರು ಸೇರ್ಪಡೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಸಣ್ಣಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯ ಸಿಗುವಂತೆ ಮಾಡುವ ಆಲೋಚನೆ ಬಿಜೆಪಿ ಹೈಕಮಾಂಡ್ನಲ್ಲಿದೆ.
ಈ ಬಾರಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಲಿದ್ದಾರೆ. ಆಡಳಿತಾತ್ಮಕ ಅನುಭವ ಹೊಂದಿರುವವರಿಗೆ ಆದ್ಯತೆ ಸಿಗಲಿದೆ ಎಂದು ಮೂಲಗಳು ಹೇಳಿವೆ. ಮೋದಿ ಸರ್ಕಾರದ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಗೆ ಮುಂದಿನ ವರ್ಷ ನಡೆಯುವ ಪಂಚ ರಾಜ್ಯದ ವಿಧಾನಸಭೆ ಚುನಾವಣೆ, ಮೈತ್ರಿ ಪಕ್ಷಗಳಿಗೆ ಆದ್ಯತೆ, ಜಾತಿ ಸಮೀಕರಣಗಳೇ ಮಾನದಂಡಗಳಾಗಿವೆ. ಕೇಂದ್ರದ ಕ್ಯಾಬಿನೆಟ್ ನಲ್ಲಿರುವ ಕೆಲ ಅಸಮರ್ಥ ಸಚಿವರಿಗೆ ಗೇಟ್ ಪಾಸ್ ನೀಡಿ ಸಚಿವ ಸಂಪುಟ ಪುನರ್ ರಚಿಸುವುದು ಮೋದಿ ಆಲೋಚನೆ.
ನರೇಂದ್ರ ಮೋದಿ ಸರ್ಕಾರ 2ನೇ ಬಾರಿಗೆ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿಲ್ಲ. ಕೊರೊನಾದ ಸಂಕಷ್ಟ, ಲಾಕ್ಡೌನ್ನಿಂದಾಗಿ ಕೇಂದ್ರ ಸರ್ಕಾರವು ಒತ್ತಡದಲ್ಲಿತ್ತು. 2 ವರ್ಷ ಕಳೆದ ಬಳಿಕ ಕೇಂದ್ರದ ಸಚಿವ ಸಂಪುಟದ ವಿಸ್ತರಣೆ ಹಾಗೂ ಪುನರ್ ರಚನೆಗೆ ಮುಹೂರ್ತ ಕೂಡಿ ಬಂದಿದೆ. ಜುಲೈ 7ರ ಬುಧವಾರ ಸಂಜೆ 5.30ಕ್ಕೆ ಕೇಂದ್ರದ ಸಚಿವ ಸಂಪುಟದ ವಿಸ್ತರಣೆ ನಡೆಯಲಿದೆ.
ಇಬ್ಬರು ಸಚಿವರ ನಿಧನ, ಮೋದಿ ಸರ್ಕಾರಕ್ಕೆ ಶಿವಸೇನೆ, ಅಕಾಲಿದಳ ಗುಡ್ ಬೈ ಹೇಳಿದ್ದರಿಂದ ಕೆಲ ಸಚಿವ ಸ್ಥಾನ ಖಾಲಿಯಾಗಿವೆ. ಸದ್ಯ ಮೋದಿ ಕ್ಯಾಬಿನೆಟ್ ನಲ್ಲಿ 53 ಮಂದಿ ಸಚಿವರಿದ್ದಾರೆ. ಇನ್ನೂ 28 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಒಟ್ಟಾರೆ ಸಚಿವ ಸಂಪುಟದ ಗಾತ್ರ 81 ಅನ್ನು ದಾಟುವಂತಿಲ್ಲ. ಹೀಗಾಗಿ 20ಕ್ಕೂ ಹೆಚ್ಚು ಸಂಸದರಿಗೆ ಈಗ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸಚಿವರಾಗುವ ಅವಕಾಶ ಇದೆ. ಜೊತೆಗೆ ರಾಜಕೀಯ ಅನಿವಾರ್ಯತೆಯ ಕಾರಣಗಳಿಗಾಗಿಯೂ ಸಚಿವ ಸಂಪುಟದ ವಿಸ್ತರಣೆ ಅಗತ್ಯವಾಗಿದೆ.
(Narendra Modi New Cabinet To Be The Youngest and Professional In Indian History)
ಇದನ್ನೂ ಓದಿ: ಮೋದಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಗುರುವಾರದ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಿಗಬಹುದೇ ಹೆಚ್ಚಿನ ಸ್ಥಾನ?
ಇದನ್ನೂ ಓದಿ: ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತೊಮ್ಮೆ ಮೋದಿ ಸಂಪುಟ ಸೇರುವ ಸಂಭವ, ದೆಹಲಿಗೆ ಬುಲಾವ್!