ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭೋಜ್ಪುರಿ ಗಾದೆಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ತಾವು ಮಾಡುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ವಿಪಕ್ಷ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಸೂಚ್ಯವಾಗಿ ಹೇಳಿದ ಮೋದಿ ‘ನಾ ಖೇಲಬ್, ನಾ ಖೇಲೆ ದೇ, ಖೇಲಾ ಕೆ ಬಿಗಾಡೆ’ ಎಂಬ ಭೋಜ್ಪುರಿ ಗಾದೆಯನ್ನುಉಲ್ಲೇಖಿಸಿದ್ದಾರೆ. ‘ಆಟವಾಡಲ್ಲ, ಆಟವಾಡಲೂ ಬಿಡಲ್ಲ, ಆಟವನ್ನು ಕೆಡಿಸಿ ಬಿಡುವುದು’ ಎಂದು ಈ ಗಾದೆ ಮಾತಿನ ಅರ್ಥ.
ಇದಕ್ಕಿಂತ ಮುನ್ನ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ ಮೋದಿ, ಕಾಂಗ್ರೆಸ್ ಈ ದೇಶದ ಹಳೇ ಪಕ್ಷ. ಅವರು ಸುಮಾರು 6 ದಶಕಗಳ ಕಾಲ ಅಧಿಕಾರದಲ್ಲಿದ್ದರು. ಆದರೆ ಈಗ ಆ ಪಕ್ಷ ಯಾವ ರೀತಿ ಆಗಿದೆ? ಕಾಂಗ್ರೆಸ್ ವಿಭಜಿತ ಪಕ್ಷವಾಗಿದೆ. ಅವರು ಎಷ್ಟು ಗೊಂದಲದಲ್ಲಿದ್ದಾರೆ ಎಂದರೆ ರಾಜ್ಯ ಸಭೆಯಲ್ಲೊಂದು, ಲೋಕಸಭೆಯಲ್ಲೊಂದು ರೀತಿ ನಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಕಳೆದ 6 ವರ್ಷಗಳಿಂದ ನೋಡುತ್ತಲೇ ಇದ್ದೇನೆ, ವಿಪಕ್ಷದ ಅಜೆಂಡಾಗಳು ಎಷ್ಟು ಬಾರಿ ಬದಲಾದವು. ನಾವು ಭ್ರಷ್ಟಾಚಾರದ ವಿರುದ್ಧ ದನಿಯೆತ್ತುತ್ತಿದ್ದೆವು. ಆದರೆ ಈಗ ಯಾರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.
ಶರದ್ ಪವಾರ್ ಅವರ ಮಾತನ್ನು ಉಲ್ಲೇಖಿಸಿದ ಮೋದಿ, ಅವರೀಗ ಜನರನ್ನು ಮರಳು ಮಾಡುತ್ತಿದ್ದಾರೆ. ಈ ಹಿಂದೆ ಅವರು ಎಪಿಎಂಸಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಈಗ ಅದನ್ನು ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.