
ನವದೆಹಲಿ, ಮಾರ್ಚ್ 16: ಗುಜರಾತ್ ರಾಜಕಾರಣಕ್ಕೆ ಅಡಿ ಇಡುವ ಮುನ್ನ ಸುದೀರ್ಘ ಕಾಲ ಆರೆಸ್ಸೆಸ್ ಪ್ರಚಾರಕರಾಗಿದ್ದ ನರೇಂದ್ರ ಮೋದಿ ತಮ್ಮ ಜೀವನದಲ್ಲಿ ಆ ಸಂಘಟನೆಯ ಪ್ರಭಾವ ಎಷ್ಟಿತ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಮಿಷನ್, ಮಹಾತ್ಮ ಗಾಂಧಿ ಇತ್ಯಾದಿ ಮಹಾತ್ಮರ ವ್ಯಕ್ತಿತ್ವಗಳು, ವಿಚಾರಗಳು ತಮ್ಮ ಜೀವನದ ದೃಷ್ಟಿಕೋನದ ಮೇಲೆ ಹೇಗೆ ಪರಿಣಾಮ ಬೀರಿದವು ಎನ್ನುವುದನ್ನು ತಿಳಿಸಿದ್ದಾರೆ. ಅಮೆರಿಕನ್ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ ಜೊತೆಗಿನ ಸಂದರ್ಶನದಲ್ಲಿ (Lex Fridman podcast) ನರೇಂದ್ರ ಮೋದಿ ತಮ್ಮ ಹಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ಆರೆಸ್ಸೆಸ್ನಂತಹ ಪವಿತ್ರ ಸಂಘಟನೆಯಿಂದ ಜೀವನದ ಮೌಲ್ಯ ಕಲಿತಿದ್ದು ನನ್ನ ಸೌಭಾಗ್ಯ. ಜೀವನಕ್ಕೆ ಒಂದು ದಿಕ್ಕು ನೀಡಿದ್ದು ಸಂಘ. ಎಲ್ಲಕ್ಕಿಂತ ದೇಶ ಮುಖ್ಯ ಎನ್ನುವ ದೇಶಪ್ರೇಮ ಕಲಿಸಿದ್ದು ಸಂಘ’ ಎಂದು ಮೋದಿ ಹೇಳಿಕೊಂಡಿದ್ದಾರೆ.
ಮೂರು ಗಂಟೆಗೂ ಅಧಿಕ ಕಾಲ ಇದ್ದ ಈ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ವಿಚಾರಗಳಿಗೆ ಆರೆಸ್ಸೆಸ್ ಪ್ರಭಾವ ದಟ್ಟವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕನ್ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ಗೆ ಮೂರು ಗಂಟೆ ಹದಿನೇಳು ನಿಮಿಷ ನರೇಂದ್ರ ಮೋದಿ ಸುದೀರ್ಘ ಸಂದರ್ಶನ
ಆರೆಸ್ಸೆಸ್ನಂತಹ ಸಂಘಟನೆಯ ವಿಶ್ವದಲ್ಲಿ ಬೇರೆಲ್ಲೂ ಇಲ್ಲ. ಆ ಸಂಘಟನೆಯನ್ನು ಹೊರಗಿನವರು ಅರ್ಥ ಮಾಡಿಕೊಳ್ಳುವುದು ಅಷ್ಟು ಸರಳವಲ್ಲ. ಆದರೆ, ನೀವು ಏನೇ ಕೆಲಸ ಮಾಡಿದರೂ ಉದ್ದೇಶ ಇರಬೇಕು. ಓದುವಾಗ ಈ ದೇಶಕ್ಕೆ ಏನಾದರೂ ಕೊಡುಗೆ ನೀಡಬಲ್ಲುದನ್ನು ಕಲಿಯುವ ಉದ್ದೇಶ ಇರಬೇಕು. ವ್ಯಾಯಾಮ ಮಾಡುವಾಗ ದೇಹದ ಆರೋಗ್ಯ ಬಲಪಡಿಸುವ ಗುರಿ ಇರಬೇಕು. ಹೀಗೆ ಎಲ್ಲಾ ಕೆಲಸದಲ್ಲೂ ಉದ್ದೇಶ ಮುಖ್ಯ ಎನ್ನುವ ಮೌಲ್ಯವನ್ನು ಆರೆಸ್ಸೆಸ್ ಕಲಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ರಾಮಕೃಷ್ಣ ಮಿಷನ್, ಸ್ವಾಮಿ ವಿವೇಕಾನಂದರ ಚಿಂತನೆಗಳು ತಮ್ಮ ವ್ಯಕ್ತಿತ್ವನ್ನು ರೂಪಿಸಿವೆ. ಸ್ವಾಮಿ ಆತ್ಮಸ್ಥಾನಂದ ಮೊದಲಾದ ಸಂತರು ತಮ್ಮಲ್ಲಿ ಆದ್ಯಾತ್ಮಿಕ ಹಸಿವು ತುಂಬಿದ್ದಾರೆ. ಪ್ರತಿಯೊಂದು ಹೆಜ್ಜೆಯಲ್ಲೂ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ನರೇಂದ್ರ ಮೋದಿ ಈ ಪೋಡ್ಕ್ಯಾಸ್ಟರ್ನಲ್ಲಿ ತಿಳಿಸಿದ್ದಾರೆ.
ಜೀವನದಲ್ಲಿ ಸಂತೃಪ್ತಿ ಎನ್ನುವುದು ವೈಯಕ್ತಿಕ ಸಾಧನೆಗಳಿಂದ ಸಿಗುವುದಿಲ್ಲ, ಬದಲಾಗಿ, ಇತರರಿಗೆ ನಾವು ನೀಡುವ ನಿಸ್ವಾರ್ಥ ಸೇವೆಯಿಂದ ಸಂತೃಪ್ತಿ ಸಿಗುತ್ತದೆ ಎಂಬುದನ್ನು ಸ್ವಾಮಿ ವಿವೇಕಾನಂದರ ಚಿಂತನೆಯಿಂದ ತಿಳಿದೆ ಎಂದು ಹೇಳಿದ ನರೇಂದ್ರ ಮೋದಿ, ಬಾಲ್ಯದಲ್ಲಿ ಗ್ರಂಥಾಲಯಕ್ಕೆ ಹೋಗಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಪುಸ್ತಕಗಳನ್ನು ಓದುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.
ತಮ್ಮ ಸರ್ಕಾರದ ಪ್ರತಿಯೊಂದು ಕ್ರಮದಲ್ಲೂ ಜನರನ್ನು ಭಾಗಿಯಾಗಿಸಲು ಒತ್ತು ನೀಡುತ್ತೇನೆ. ಇದಕ್ಕೆ ಮಹಾತ್ಮ ಗಾಂಧಿ ಅವರ ಹೋರಾಟವೇ ಪ್ರೇರಣೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಮಹಾತ್ಮ ಗಾಂಧಿ ಶ್ರೇಷ್ಠ ನಾಯಕರೆನಿಸಿದ್ದು 20ನೇ ಶತಮಾನಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ಶತಮಾನಗಳಿಗೂ ಸಲ್ಲುವ ಶ್ರೇಷ್ಠ ನಾಯಕ. ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಜನಾಂದೋಲನವಾಗಿ ಬದಲಿಸಿದರು. ಜನಶಕ್ತಿ ಏನೆಂಬುದನ್ನು ಅವರು ಅರಿತಿದ್ದರು. ತಾವೂ ಕೂಡ ಜನರನ್ನು ಸಾಧ್ಯವಾದಷ್ಟೂ ಭಾಗಿದಾರರನ್ನಾಗಿ ಮಾಡಲು ಗಾಂಧೀಜಿಯೇ ಪ್ರೇರಣೆ ಎಂದು ನರೇಂದ್ರ ಮೋದಿ ಅವರು ಲೆಕ್ಸ್ ಫ್ರೀಡ್ಮ್ಯಾನ್ ಜೊತೆಗಿನ ಪಾಡ್ಕ್ಯಾಸ್ಟ್ನ್ಲಲಿ ಹೇಳಿದ್ದಾರೆ.
ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ…
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ