Narendra Modi: ಅಮೆರಿಕನ್ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ಗೆ ಮೂರು ಗಂಟೆ ಹದಿನೇಳು ನಿಮಿಷ ನರೇಂದ್ರ ಮೋದಿ ಸುದೀರ್ಘ ಸಂದರ್ಶನ
Lex Fridman podcast with Narendra Modi: ಅಮೆರಿಕದ ಖ್ಯಾತ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ ಅವರಿಗೆ ನರೇಂದ್ರ ಮೋದಿ ನೀಡಿದ ಸುದೀರ್ಘ ಸಂದರ್ಶನದಲ್ಲಿ ಹಲವು ವಿಚಾರಗಳ ಚರ್ಚೆಯಾಗಿದೆ. ತಮ್ಮ ವೈಯಕ್ತಿಕ ವಿಚಾರಗಳಿಂದ ಹಿಡಿದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳವರೆಗೆ ನರೇಂದ್ರ ಮೋದಿ ಮಾತನಾಡಿದ್ದಾರೆ. ಲೆಕ್ಸ್ ಫ್ರೀಡ್ಮ್ಯಾನ್ ಈ ಸಂದರ್ಶನದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋವನ್ನು ಲೇಖನದ ಕೊನೆಯಲ್ಲಿ ಎಂಬೆಡ್ ಮಾಡಲಾಗಿದೆ.

ನವದೆಹಲಿ, ಮಾರ್ಚ್ 16: ಅಮೆರಿಕದ ಸಂಶೋಧಕ ವಿಜ್ಞಾನಿ ಹಾಗೂ ಖ್ಯಾತ ಪೋಡ್ಕ್ಯಾಸ್ಟರ್ ಆದ ಲೆಕ್ಸ್ ಫ್ರೀಡ್ಮ್ಯಾನ್ (Lex Fridman) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಸಂದರ್ಶನ ನೀಡಿದ್ದಾರೆ. ಫ್ರೀಡ್ಮ್ಯಾನ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಈ ಪೋಡ್ಕ್ಯಾಸ್ಟ್ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಬರೋಬ್ಬರಿ 3 ಗಂಟೆ 17 ನಿಮಿಷದಷ್ಟು ಸುದೀರ್ಘವಾಗಿದೆ. ವಿದೇಶೀ ಖಾಸಗಿ ಮಾಧ್ಯಮವೊಂದಕ್ಕೆ ನರೇಂದ್ರ ಮೋದಿ (PM Narendra Modi) ನೀಡಿದ ಮೊದಲ ಸಂದರ್ಶನ ಇದಾಗಿದೆ. ಭಾರತದಲ್ಲಿ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರಿಗೆ ಪ್ರಧಾನಿಗಳು ಇತ್ತೀಚೆಗೆ ಸಂದರ್ಶನ ನೀಡಿದ್ದರು. ಈಗ ವಿದೇಶೀ ಪೋಡ್ಕ್ಯಾಸ್ಟರ್ಗೆ ಅದಕ್ಕಿಂತಲೂ ಸುದೀರ್ಘವಾದ ಮಹಾ ಸಂದರ್ಶನ ನೀಡಿದ್ದಾರೆ.
ನರೇಂದ್ರ ಮೋದಿ ಅವರು ಲೆಕ್ಸ್ ಫ್ರೀಡ್ಮ್ಯಾನ್ ಅವರಿಗೆ ನೀಡಿರುವ ಈ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ದಿನಗಳವರೆಗೆ, ಹಾಗು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಪ್ರಧಾನಿಯಾಗುವವರೆಗಿನ ರಾಜಕೀಯ ಬೆಳವಣಿಗೆಯ ಹಂತಗಳು ಇವೆಲ್ಲದರ ಬಗ್ಗೆ ಮೋದಿ ಮಾತನಾಡಿದ್ದಾರೆ.
ಈ ಸಂದರ್ಶನದ ಪೂರ್ಣ ವಿಡಿಯೋ, ಸುದ್ದಿಯ ಕೊನೆಯಲ್ಲಿ ಎಂಬೆಡ್ ಮಾಡಲಾಗಿದೆ, ಗಮನಿಸಿ…
ಇದನ್ನೂ ಓದಿ: ಉದ್ಯಮಶೀಲತೆ ಗುಜರಾತ್ ಜನರ ಡಿಎನ್ಎಯಲ್ಲಿದೆ: ಟಿವಿ9 ಎಂಡಿ ಬರುಣ್ ದಾಸ್
ಉಕ್ರೇನ್ ರಷ್ಯಾ ಬಿಕ್ಕಟ್ಟು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಸೂಕ್ಷ್ಮತೆ, ಚೀನಾ ಜೊತೆಗಿನ ಸಂಬಂಧ ಇತ್ಯಾದಿ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಹಿಂದಿಯಲ್ಲೇ ಹೆಚ್ಚಾಗಿ ಮಾತನಾಡಿರುವ ನರೇಂದ್ರ ಮೋದಿ, ತಮ್ಮ ರಾಜಕೀಯ ವಿಚಾರಗಳಿಗೆ ಆರೆಸ್ಸೆಸ್ನಿಂದ ಯಾವ ರೀತಿ ಪ್ರಭಾವ ಆಗಿದೆ, ಆ ಸಂಘಟನೆಯೊಂದಿಗೆ ತಮ್ಮಗಿದ್ದ ನಂಟು ಯಾವ ರೀತಿಯದ್ದು ಎಂಬುದನ್ನು ಸವಿಸ್ತಾರವಾಗಿ ಮಾತನಾಡಿದ್ದಾರೆ. 2002ರ ಗೋಧ್ರಾ ಹತ್ಯಾಕಾಂಡ ಘಟನೆಯನ್ನೂ ಅವರು ಪ್ರಸ್ತಾಪಿಸಿ, ವಿಪಕ್ಷಗಳು ಮತ್ತು ವಿರೋಧಿಗಳು ತನ್ನನ್ನು ಆ ಪ್ರಕರಣ ಮುಂದಿಟ್ಟುಕೊಂಡು ಹೇಗೆ ಹಣಿಯಲು ಯತ್ನಿಸಿದರು ಎಂಬುದನ್ನು ವಿವರಿಸಿದ್ದಾರೆ.
ಗುಜರಾತ್ ಗಲಭೆಗೆ ಗೋಧ್ರಾ ರೈಲು ದುರಂತ ಘಟನೆ ಹೇಗೆ ಕಾರಣವಾಯಿತು, ಗುಜರಾತ್ನಲ್ಲಿ ಹಿಂದಿನಿಂದಲೂ ಗಲಭೆಗಳು ಎಷ್ಟು ಸಾಮಾನ್ಯವಾಗಿದ್ದುವು, 2002ರ ಗಲಭೆ ಬಳಿಕ 22 ವರ್ಷಗಳಿಂದ ಗುಜರಾತ್ನಲ್ಲಿ ಮತ್ತೆ ಗಲಭೆಯೇ ಆಗಿಲ್ಲ ಎಂಬ ಸಂಗತಿಯನ್ನು ಲೆಕ್ಸ್ ಫ್ರೀಡ್ಮ್ಯಾನ್ ಅವರಿಗೆ ಮೋದಿ ಅರುಹಿದ್ದಾರೆ.
ಇದನ್ನೂ ಓದಿ: ಭಾರತದ್ದೇ ಸ್ವಂತ ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣಕ್ಕೆ ಸರ್ಕಾರದ ಆಸಕ್ತಿ; ಏನಿದರ ಉಪಯೋಗ, ಇದು ಅಷ್ಟು ಸುಲಭವಾ?
2000 ಮತ್ತು 2001ರಲ್ಲಿ ದೆಹಲಿಯ ರೆಡ್ ಫೋರ್ಟ್, ಅಮೆರಿಕದ ಟ್ವಿನ್ ಟವರ್ಸ್, ಜಮ್ಮು ಕಾಶ್ಮೀರ ವಿಧಾನಸಭೆ, ದೆಹಲಿಯ ಸಂಸತ್ ಮೇಲೆ ಉಗ್ರರು ದಾಳಿ ಮಾಡಿದ್ದನ್ನು ಸ್ಮರಿಸಿದ ನರೇಂದ್ರ ಮೋದಿ, ಹೇಗೆ ಎಲ್ಲಾ ಉಗ್ರಗಾಮಿಗಳದ್ದು ಒಂದೇ ಮನಸ್ಕ ಸ್ಥಿತಿ ಇದೆ ಎಂಬುದನ್ನು ಬಿಡಿಸಿ ಹೇಳಿದ್ದಾರೆ.
ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ…
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ