ನೇರ ಚುನಾವಣೆ ಗೆಲ್ಲಲಾಗದವರಿಂದ ರಾಜ್ಯಸಭೆ ಹಾದಿ: ಸೋನಿಯಾ ಗಾಂಧಿಗೆ ನರೇಂದ್ರ ಮೋದಿ ಕುಟುಕು
Narendra Modi vs Sonia Gandhi: ನೇರವಾಗಿ ಚುನಾವಣೆ ಗೆಲ್ಲಲಾಗದವರು ರಾಜಸ್ಥಾನಕ್ಕೆ ಬಂದು ರಾಜ್ಯಸಭೆ ಮೂಲಕ ಸಂಸತ್ತು ಪ್ರವೇಶಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ರಾಜಸ್ಥಾನದ ಜಾಲೋರ್ನಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಮಾತನಾಡಿದ ಮೋದಿ, ರಾಜಸ್ಥಾನದಿಂದ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿ ವೇಣುಗೋಪಾಲ್, ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರನ್ನು ಟೀಕಿಸಿದ್ದಾರೆ. ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ 2004ರಿಂದ 2024ರವರೆಗೂ ರಾಯ್ಬರೇಲಿ ಕ್ಷೇತ್ರದಿಂದ ಗೆದ್ದು ಸಂಸತ್ತಿಗೆ ಹೋಗಿದ್ದರು. ಈ ಬಾರಿ ಅವರು ರಾಯ್ಬರೇಲಿಯಲ್ಲಿ ಸ್ಪರ್ಧಿಸುತ್ತಿಲ್ಲ. ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿದ್ದಾರೆ.
ಜೈಪುರ್, ಏಪ್ರಿಲ್ 21: ನೇರವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಾಗದವರು ರಾಜ್ಯಸಭೆ ಮಾರ್ಗದಲ್ಲಿ ಸಂಸತ್ತು ಪ್ರವೇಶಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ. ರಾಜಸ್ಥಾನದ ಜಾಲೋರ್ನಲ್ಲಿ (Jalore) ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ರಾಜಸ್ಥಾನ ಮೂಲಕ ರಾಜ್ಯಸಭೆ ಪ್ರವೇಶಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ನಡೆಸಿದ ವಾಗ್ದಾಳಿ ಇದಾಗಿದೆ. ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ 20 ವರ್ಷದಿಂದ ರಾಯ್ಬರೇಲಿ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದವರು ಈ ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ. ಈ ರಾಜ್ಯದಿಂದ ರಾಜ್ಯಸಭೆಗೆ ಹೋದವರು ರಾಜ್ಯದ ಜನರಿಗಾಗಿ ಏನೂ ಕೆಲಸ ಮಾಡಲಿಲ್ಲ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ.
‘ದಕ್ಷಿಣದಿಂದ ಒಬ್ಬ ಮುಖಂಡರನ್ನು ಇಲ್ಲಿಂದ ರಾಜ್ಯಸಭೆಗೆ ಕಳುಹಿಸಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೀವು ರಾಜ್ಯಸಭೆಗೆ ಕಳುಹಿಸಿದಿರಿ. ಅವರನ್ನು ರಾಜ್ಯದಲ್ಲಿ ನೀವು ಮತ್ತೆಂದಾದರೂ ನೋಡಿದಿರಾ? ಈಗ ಪಕ್ಷದಿಂದ ಮತ್ತೊಬ್ಬ ಮುಖಂಡರನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ. ನೇರ ಚುನಾವಣೆಗಳಲ್ಲಿ ಸ್ಪರ್ಧಿಸಲಾಗದವರು ಈ ಬಾರಿ ರಾಜಸ್ಥಾನಕ್ಕೆ ಬಂದಿದ್ದಾರೆ. ಪರಿವಾರವಾದ ಮತ್ತು ಭ್ರಷ್ಟಾಚಾರ ಎಂಬ ಗೆದ್ದಿಲುಹುಳದಿಂದ ಈ ದೇಶವನ್ನು ಕೃಶವನ್ನಾಗಿಸಿದೆ ಕಾಂಗ್ರೆಸ್,’ ಎಂದು ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಉಲ್ಲೇಖಿಸಿದ ದಕ್ಷಿಣದ ಮುಖಂಡ ಕೆ.ಸಿ. ವೇಣುಗೋಪಾಲ್. ಕೇರಳದ ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು ರಾಜಸ್ಥಾನದಿಂದ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಮುಖಂಡರು ಎಂದು ಪ್ರಧಾನಿ ಹೆಸರು ಹೇಳದೇ ಪ್ರಸ್ತಾಪಿಸಿದ್ದು ಸೋನಿಯಾ ಗಾಂಧಿ ಅವರನ್ನು.
ಇದನ್ನೂ ಓದಿ: ಚುನಾವಣಾ ಬಾಂಡ್ಗಳು ಮತ್ತೆ ಜಾರಿಗೆ ಬರಬಹುದು: ನಿರ್ಮಲಾ ಸೀತಾರಾಮನ್
ಈ ದೇಶದ ಯುವಜನರಿಗೆ ಕಾಂಗ್ರೆಸ್ ಮೇಲೆ ಆಕ್ರೋಶ ಇದೆ. ಅವರ ಮುಖವನ್ನು ಮತ್ತೆ ಕಾಣಲು ಬಯಸುವುದಿಲ್ಲ. 2014ಕ್ಕೆ ಮುಂಚೆ ಇದ್ದ ಸ್ಥಿತಿ ಮತ್ತೆ ಮರುಕಳಿಸುವುದು ಈ ದೇಶಕ್ಕೆ ಬೇಕಿಲ್ಲ ಎಂದು ಪ್ರಧಾನಿಗಳು ಹೇಳಿದ್ದಾರೆ.
ಕಾಂಗ್ರೆಸ್ನ ಇವತ್ತಿನ ದುಸ್ಥಿತಿಗೆ ಆ ಪಕ್ಷವೇ ಹೊಣೆ. ಒಂದು ಕಾಲದಲ್ಲಿ 400 ಸ್ಥಾನಗಳನ್ನು ಗೆದ್ದಿದ್ದ ಪಕ್ಷ ಈಗ 300 ಕ್ಷೇತ್ರಗಳಲ್ಲಿ ಸ್ವಂತವಾಗಿ ನಿಲ್ಲಲೂ ಅಸಮರ್ಥವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ರಾಂಚಿ: ಅನಾರೋಗ್ಯ, ಇಂಡಿಯಾ ಒಕ್ಕೂಟದ ರ್‍ಯಾಲಿಯಲ್ಲಿ ಭಾಗವಹಿಸುತ್ತಿಲ್ಲ ರಾಹುಲ್ ಗಾಂಧಿ
ರಾಜಸ್ಥಾನದಲ್ಲಿ 25 ಲೋಕಸಭಾ ಕ್ಷೇತ್ರಗಳಲ್ಲಿದ್ದು 12 ಸ್ಥಾನಗಳಿಗೆ ಏಪ್ರಿಲ್ 19ರಂದು ಮತದಾನವಾಗಿತ್ತು. ಏಪ್ರಿಲ್ 26ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಉಳಿದ 13 ಸ್ಥಾನಗಳಿಗೆ ಮತದಾನವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ