
ನಾಸಿಕ್,ಸೆಪ್ಟೆಂಬರ್ 17: ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಡ್ ನಗರ ಪಂಚಾಯತ್ ಕಚೇರಿಯಲ್ಲಿ ಶಿವಸೇನೆಯ ಯುವ ಘಟಕವಾದ ‘ಯುವಸೇನಾ’ ಕಾರ್ಯಕರ್ತರು ಅತ್ಯಂತ ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಯುವಸೇನಾ ಜಿಲ್ಲಾ ಮುಖಂಡ ವಿಕ್ರಮ್ ರಾಂಧವೆ ನೇತೃತ್ವದಲ್ಲಿ ಕಚೇರಿಗೆ ನುಗ್ಗಿದ ಕಾರ್ಯಕರ್ತರು, ಪುರಸಭೆಯ ಮುಖ್ಯ ಅಧಿಕಾರಿ ಧೀರಜ್ ಭಮ್ರೆ ಅವರ ಅಧಿಕೃತ ಮೇಜಿನ ಮೇಲೆಯೇ ಎರಡು ಬೀದಿ ನಾಯಿಗಳನ್ನು ತಂದು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಣ್ಣ ಚೀಲಗಳಲ್ಲಿ ಎರಡು ಬೀದಿ ನಾಯಿಗಳನ್ನು ಹೊತ್ತು ತಂದ ಕಾರ್ಯಕರ್ತರು, ಅಧಿಕಾರಿಯ ಮೇಜಿನ ಮೇಲೆ ಬಿಟ್ಟರು. ಅಪರಿಚಿತ ವಾತಾವರಣ ಕಂಡು ಆ ನಾಯಿಮರಿಗಳು ಟೇಬಲ್ ಮೇಲೆಯೇ ಆತಂಕದಿಂದ ಓಡಾಡಿದವು. ಕೇವಲ ನಾಯಿಮರಿಗಳನ್ನು ಬಿಟ್ಟಿದ್ದಷ್ಟೇ ಅಲ್ಲದೆ, ಅಧಿಕಾರಿ ಭಮ್ರೆ ಅವರ ಮೇಜಿನ ಮೇಲೆ ನೋಟುಗಳಿಂದ ಮಾಡಿದ ಹಾರವನ್ನು ಹಾಕಿ ಆಡಳಿತದ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿತನವನ್ನು ವ್ಯಂಗ್ಯವಾಡಿದರು.
ನಿಫಡ್ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ವಾಹನ ಸವಾರರು ಪ್ರತಿದಿನ ಕಡಿತಕ್ಕೊಳಗಾಗುತ್ತಿದ್ದಾರೆ. ಪ್ರಸ್ತುತ ಗಣೇಶೋತ್ಸವ ನಡೆಯುತ್ತಿದ್ದು, ಮಂಟಪಗಳಿಗೆ ತೆರಳುವ ಭಕ್ತರು ಹಾಗೂ ಸಾರ್ವಜನಿಕರು ನಾಯಿಗಳ ಭಯದಿಂದ ಓಡಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮತ್ತಷ್ಟು ಓದಿ:
ಟೆಂಡರ್ ದಂಧೆ ಆರೋಪ: ಆಡಳಿತವು ಜನರ ಜೀವ ರಕ್ಷಿಸುವ ಸಂತಾನಹರಣ ಚಿಕಿತ್ಸೆ (ABC) ಮತ್ತು ನಾಯಿ ಹಿಡಿಯುವ ಕಾರ್ಯಕ್ಕೆ ಆದ್ಯತೆ ನೀಡದೆ ಕೇವಲ ಕಮಿಷನ್ ಬರುವ ಟೆಂಡರ್ ಪ್ರಕ್ರಿಯೆಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ರಾಂಧವೆ ಆರೋಪಿಸಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರ ಸಮ್ಮುಖದಲ್ಲೇ ಇಡೀ ಕಚೇರಿಗೆ ಬೀದಿ ನಾಯಿಗಳನ್ನು ನುಗ್ಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಾಣಿ ಕಲ್ಯಾಣ ಮಂಡಳಿಯ ಅನಿಮಲ್ ಬರ್ತ್ ಕಂಟ್ರೋಲ್ (ABC) ನಿಯಮಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ, ಬದಲಾಗಿ ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ರೇಬೀಸ್ ಲಸಿಕೆ ಹಾಕಿ ಮತ್ತೆ ಅದೇ ಜಾಗಕ್ಕೆ ಬಿಡಬೇಕಾಗುತ್ತದೆ. ಆದರೆ ಹೆಚ್ಚಿನ ಸ್ಥಳೀಯ ಸಂಸ್ಥೆಗಳು ಅನುದಾನ ಮತ್ತು ಮೂಲಸೌಕರ್ಯದ ಕೊರತೆಯಿಂದ ಈ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವುದು ಇಂತಹ ಘರ್ಷಣೆಗಳಿಗೆ ಮುಖ್ಯ ಕಾರಣವಾಗಿದೆ.
ವಿಡಿಯೋ
🚨 Fed up with being ignored, angry activists in Nashik’s Niphad brought the problem straight to the officials’ desks!
After complaint after complaint about the stray dog menace went unheard, protesters released stray dogs right inside the Nagar Panchayat office. If the… pic.twitter.com/zUpaqRCCtm
— Oxomiya Jiyori 🇮🇳 (@SouleFacts) September 17, 2026
ಹೆಚ್ಚುತ್ತಿರುವ ರೇಬೀಸ್ ಭೀತಿ: ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿದ್ದು, ರೇಬೀಸ್ ಸಾವಿನ ಪ್ರಮಾಣದಲ್ಲೂ ಭಾರತ ಮುಂಚೂಣಿಯಲ್ಲಿದೆ. ಇಂತಹ ಸಮಯದಲ್ಲಿ ನಾಸಿಕ್‌ನ ಈ ಹೈಡ್ರಾಮಾ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ