ರಾಯ್‌ಪುರ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧೈರ್ಯವಿದ್ದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸುತ್ತಿರುವುದನ್ನು ನೇರ ಪ್ರಸಾರ ಮಾಡಲಿ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಸವಾಲು ಹಾಕಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಇಡಿ ಕಚೇರಿ ಎದುರು ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭೂಪೇಶ್ ಬಘೇಲ್, ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಗುರುವಾರ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಜುಲೈ 25ರಂದು ಮತ್ತೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ. ಸೋನಿಯಾ ಗಾಂಧಿ ವಿರುದ್ಧದ ಇಡಿ ಕ್ರಮಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: National Herald case ಜುಲೈ 25ಕ್ಕೆ ಮತ್ತೊಮ್ಮೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್
ಕೇಂದ್ರ ಸರ್ಕಾರದ ವಿರುದ್ಧ ಸ್ಥಳೀಯ ಭಾಷೆ ಛತ್ತೀಸ್‌ಗಢಿಯಲ್ಲಿ ಮಾತನಾಡಿದ ಸಿಎಂ ಭೂಪೇಶ್ ಬಘೇಲ್, ಇಡಿ ಅಧಿಕಾರಿಗಳು ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ ಕೊಠಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆ ವಿಚಾರಣೆಯ ನೇರ ಪ್ರಸಾರದ ಲಿಂಕ್‌ಗಳನ್ನು ಎಲ್ಲಾ ಸುದ್ದಿ ಚಾನೆಲ್‌ಗಳಿಗೆ ನೀಡಬೇಕು. ಅಥವಾ ವಿಚಾರಣೆ ನಡೆಯುತ್ತಿರುವ ರೂಮ್ನೊಳಗೆ ನ್ಯೂಸ್ ಚಾನೆಲ್‌ಗಳ ಕ್ಯಾಮೆರಾಗಳಿಗೆ ಅನುಮತಿ ನೀಡಬೇಕು. ಸೋನಿಯಾ ಗಾಂಧಿಯವರಿಗೆ ಏನು ಪ್ರಶ್ನೆಗಳನ್ನು ಕೇಳಲಾಗಿದೆ, ಅದಕ್ಕೆ ಅವರು ಏನು ಉತ್ತರ ನೀಡಿದ್ದಾರೆ ಎಂಬುದನ್ನು ದೇಶದ ಜನರು ನೋಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರಕ್ಕೆ ಧೈರ್ಯವಿದ್ದರೆ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸುವ ಜಾಗದಲ್ಲಿ ಇಡಿ ಅಧಿಕಾರಿಗಳು ಕ್ಯಾಮೆರಾ ಹಾಕಲಿ. ನಿಮಗೆ ಆ ಧೈರ್ಯವಿದೆಯೇ? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಲ್ಲಿ ಹಗರಣ ನಡೆದಿದೆ ಎಂದು ದೇಶದ ಜನರು ತಿಳಿಯಬೇಕಿದೆ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ.
मोदी सरकार की पालतू पिट्ठू ED केवल विपक्ष को परेशान करने का काम करती है,
छत्तीसगढ़ नान घोटाले की जांच भी इसी ED के पास है,
घोटाले से जुड़े CM सर और CM मैडम कौन हैं इसकी पूछताछ रमन सिंह से कब की जाएगी ?#सत्य_साहस_सोनिया_गांधी pic.twitter.com/XgQ57YDt97
— INC Chhattisgarh (@INCChhattisgarh) July 21, 2022
ಮೋದಿ ಸರ್ಕಾರವು 75 ವರ್ಷದ ಮಹಿಳೆಯಾದ ಸೋನಿಯಾ ಗಾಂಧಿಯವರಿಗೆ ಅನಾರೋಗ್ಯವಿದೆ ಎಂದು ತಿಳಿದಿದ್ದರೂ ಇಡಿ ಕಚೇರಿಗೆ ಕರೆಸಿಕೊಳ್ಳುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಆರೋಪಿಸಿದ್ದಾರೆ.
ಇಡಿ ಅಧಿಕಾರಿಗಳು ಕಾಂಗ್ರೆಸ್ ಅಧ್ಯಕ್ಷರನ್ನು ಕಚೇರಿಗೆ ಕರೆಯುವ ಬದಲು ಲಿಖಿತ ಹೇಳಿಕೆಯನ್ನು ತೆಗೆದುಕೊಳ್ಳಬಹುದಿತ್ತು ಎಂದು ಅವರು ಹೇಳಿದ್ದಾರೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧ ಇಡಿ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಭೂಪೇಶ್ ಬಘೇಲ್ ಪ್ರಶ್ನಿಸಿದ್ದಾರೆ.
Published On - 8:59 am, Fri, 22 July 22