National Herald case ಜುಲೈ 25ಕ್ಕೆ ಮತ್ತೊಮ್ಮೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್
ಸೋನಿಯಾ ಗಾಂಧಿಯವರಲ್ಲಿ ಇಡಿ, ನಮಗೆ ಕೇಳುವುದಕ್ಕೆ ಪ್ರಶ್ನೆ ಇಲ್ಲ ನೀವು ಹೋಗಬಹುದು ಎಂದಿದೆ. ಆದರೆ ನಿಮಗೆ ಎಷ್ಟು ಬೇಕಾದರೂ ಪ್ರಶ್ನೆ ಕೇಳಬಹುದು. ನಾನು 8-9 ಗಂಟೆವರೆಗೆ ನಿಲ್ಲಲು ಸಿದ್ಧಳಿದ್ದೇನೆ ಎಂದು ಸೋನಿಯಾ ಹೇಳಿದ್ದಾರೆ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ(National Herald case) ಎರಡನೇ ಸುತ್ತಿನ ವಿಚಾರಣೆಗಾಗಿ ಜುಲೈ 25ರಂದು ಹಾಜರಾಗುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಗುರುವಾರ ಇಡಿ ಸಮನ್ಸ್ ನೀಡಿದೆ. ಇಂದು, ಸೋನಿಯಾ ಗಾಂಧಿ ಇಡಿ (ED) ಕಚೇರಿಗೆ ಹೋಗಿದ್ದರು. ಅಲ್ಲಿ 2-3 ಗಂಟೆಗಳ ಕಾಲ ವಿಚಾರಣೆಗೆ ಒಳಗಾದರು, ನಂತರ ಇಡಿ ಅಧಿಕಾರಿಗಳು ಕೇಳಲು ಬೇರೆ ಏನೂ ಇಲ್ಲದ ಕಾರಣ ಹೋಗಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷರು, ಎಷ್ಟು ಪ್ರಶ್ನೆಗಳನ್ನು ಬೇಕಾದರೂ ಕೇಳಿ. ನಾನು 8 ಅಥವಾ 9 ಗಂಟೆ ವರೆಗೂ ನಿಲ್ಲಲು ಸಿದ್ದ ಎಂದು ಹೇಳಿರುವುದಾಗಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದವಳು. ಹಾಗಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಮುಂದೆ ಯಾವ ದಿನಾಂಕಕ್ಕೆ ಹಾಜರಾಗಬೇಕು ಎಂದು ಸೋನಿಯಾ ಗಾಂಧಿ ಕೇಳಿದ್ದಾರೆ ಎನ್ನಲಾಗಿದೆ. ಇಂದು ನಡೆದ ವಿಚಾರಣೆಯಲ್ಲಿ ಸುಮಾರು 27ರಿಂದ 28 ಪ್ರಶ್ನೆಗಳಿಗೆ ಸೋನಿಯಾ ಉತ್ತರಿಸಿದರು. ಇದರ ನಂತರ ಅವರು ಕೋವಿಡ್ ನಿಂದ ಚೇತರಿಸುತ್ತಿರುವ ಕಾರಣ ಮನೆಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಹಾಗಾಗಿ ಸಂಸ್ಥೆ ಇಂದಿನ ವಿಚಾರಣೆ ಮುಕ್ತಾಯ ಮಾಡಿ ಹೋಗಲು ಅನುಮತಿಸಿತು.
ಮೂಲಗಳ ಪ್ರಕಾರ ಕಾಂಗ್ರೆಸ್ ಅಧ್ಯಕ್ಷೆ ಅಲ್ಲಿಂದ ಹೊರಡುವಾಗ, ಇಡಿ ಜುಲೈ 26 ರಂದು ಹಾಜರಾಗುವಂತೆ ಹೇಳಿದೆ. ಆದರೆ ಸೋನಿಯಾ ಜುಲೈ 25 ರಂದು ಬರುವುದಾಗಿ ಹೇಳಿದಾಗ ಸಂಸ್ಥೆ ಒಪ್ಪಿದೆ. “ಏಜೆನ್ಸಿಯು ತನ್ನ ತನಿಖೆಯನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯಲು ಬಯಸುತ್ತದೆ. ಆಕೆಯ ವಯಸ್ಸು ಮತ್ತು ಇತ್ತೀಚಿನ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅವರು ಅನಾನುಕೂಲತೆಯನ್ನು ಅನುಭವಿಸಲು ನಾವು ಬಯಸುವುದಿಲ್ಲ” ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ ಪ್ರೋಟೋಕಾಲ್ ಅನ್ನು ಗಮನದಲ್ಲಿಟ್ಟುಕೊಂಡು ವಿಚಾರಣೆ ನಡೆಸಲಾಯಿತು. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕೋವಿಡ್-ಋಣಾತ್ಮಕ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಇಡಿ ಕಚೇರಿ ಆವರಣದಲ್ಲಿ ಆಂಬುಲೆನ್ಸ್ ಮತ್ತು ಏಮ್ಸ್‌ನ ಇಬ್ಬರು ವೈದ್ಯರು ಕೂಡ ನಿಂತಿದ್ದರು.
ನ್ಯಾಷನಲ್ ಹೆರಾಲ್ಡ್ ಮಾಲಕತ್ವದ ಕಾಂಗ್ರೆಸ್ ಪ್ರವರ್ತಿತ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಣಕಾಸು ಅವ್ಯವಹಾರಗಳ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಕೆಯ ಮಗ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಅದೇ ಸಹಾಯಕ ನಿರ್ದೇಶಕ ಮಟ್ಟದ ತನಿಖಾ ಅಧಿಕಾರಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸಿದ್ದಾರೆ.
Published On - 7:25 pm, Thu, 21 July 22