ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಂದು ಬೀಳ್ಕೊಡುಗೆ ಔತಣ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ರಾಷ್ಟ್ರಪತಿ ಹುದ್ದೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೋವಿಂದ್ ಅವರು ಅಧಿಕಾರದಿಂದ ಕೆಳಗೆ ಇಳಿಯುತ್ತಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ದ್ರೌಪದಿ ಮುರ್ಮು ಜುಲೈ 25ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಂದು ಬೀಳ್ಕೊಡುಗೆ ಔತಣ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 22, 2022 | 8:04 AM

ದೆಹಲಿ: ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುತ್ತಿರುವ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ (ಜುಲೈ 22) ಸಂಜೆ 5.30ಕ್ಕೆ ನಗರದ ಅಶೋಕ ಹೊಟೆಲ್​ನಲ್ಲಿ ಔತಣ ನೀಡಲಿದ್ದಾರೆ. ಕಳೆದ ಜುಲೈ 13ರಂದು ರಾಮನಾಥ್ ಕೋವಿಂದ್ (Ram Nath Kovind) ಅವರನ್ನು ಮೋದಿ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿದ್ದರು. ಇದು ಸೌಜನ್ಯದ ಭೇಟಿಯಾಗಿತ್ತು. ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೋವಿಂದ್ ಅವರು ಅಧಿಕಾರದಿಂದ ಕೆಳಗೆ ಇಳಿಯುತ್ತಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ದ್ರೌಪದಿ ಮುರ್ಮು ಜುಲೈ 25ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ದಲಿತ ನಾಯಕ ರಾಮನಾಥ್ ಕೋವಿಂದ್ ಅವರು ಜುಲೈ 25, 2017ರಂದು ಅಧಿಕಾರಕ್ಕೆ ಬಂದಿದ್ದರು. 1994ರಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದ ಅವರು, ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಪುನರಾಯ್ಕೆಯಾಗಿದ್ದ ಕೋವಿಂದ್, 2006ರವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2015ರಿಂದ 2017ರ ವರೆಗೆ ಬಿಹಾರದ ರಾಜ್ಯಪಾಲರಾಗಿದ್ದರು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್​ನಲ್ಲಿ ಸುಮಾರು 16 ವರ್ಷಗಳ ಕಾಲ ವಕೀಲರಾಗಿದ್ದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿರುವ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ. ಈ ಕುರಿತ ಅಧಿಕೃತ ಘೋಷಣೆ ಇನ್ನಷ್ಟೇ ಪ್ರಕಟವಾಗಬೇಕಿದೆ. ಅವರ ಮನೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಸಾಧ್ಯತೆಯಿದೆ. ದ್ರೌಪದಿ ಮುರ್ಮು ಅವರ ಮನೆಯಲ್ಲಿ ಪ್ರಧಾನಿ ಭೇಟಿಗೆ ಅಗತ್ಯವಿರುವ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ. 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ದ್ರೌಪದಿ ಮುರ್ಮು ಅವರು ಈ ಸ್ಥಾನಕ್ಕೇರಿದ ದೇಶದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ.

1958 ಜೂನ್ 20ರಂದು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಉಪರಬೇದಾ ಗ್ರಾಮದಲ್ಲಿ ಸಂತಾಲ್ ಬುಡಕಟ್ಟು ಸಮುದಾಯದಲ್ಲಿ ಜನನ. ಬ್ಯಾಂಕ್ ಉದ್ಯೋಗಿಯಾಗಿದ್ದ ಶ್ಯಾಮ್ ಚರಣ್ ಮುರ್ಮು ಎಂಬವರನ್ನು ಮುರ್ಮು ವಿವಾಹವಾಗಿದ್ದು, 2014ರಲ್ಲಿ ಪತಿ ಸಾವಿಗೀಡಾಗಿದ್ದು. ಇಬ್ಬರು ಪುತ್ರರು ಕೂಡಾ ಮರಣ ಹೊಂದಿದ್ದು ಮಗಳು ಇತಿಶ್ರೀ ಮುರ್ಮು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಮುರ್ಮು ಶಿಕ್ಷಕಿಯಾಗಿದ್ದರು. ರಾಯಿರಂಗ್ ಪುರದಲ್ಲಿ ಶ್ರೀ ಅರಬಂದೊ ಇಂಟೆಗ್ರಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅವರು ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ಒಡಿಶಾ ಸರ್ಕಾರ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

Published On - 8:04 am, Fri, 22 July 22