Rahul Gandhi: ಇಡಿ ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ರಾಹುಲ್ ಗಾಂಧಿ, ಜೂನ್ 8ಕ್ಕೆ ಸೋನಿಯಾ ಗಾಂಧಿ ವಿಚಾರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 02, 2022 | 9:19 AM

ಪ್ರಸ್ತುತ ವಿದೇಶ ಪ್ರವಾಸದಲ್ಲಿರುವ ಕಾರಣ ಹೆಚ್ಚಿನ ಸಮಯ ಬೇಕು ಎಂದು ರಾಹುಲ್ ಗಾಂಧಿ ಕೋರಿದ್ದಾರೆ

Rahul Gandhi: ಇಡಿ ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ರಾಹುಲ್ ಗಾಂಧಿ, ಜೂನ್ 8ಕ್ಕೆ ಸೋನಿಯಾ ಗಾಂಧಿ ವಿಚಾರಣೆ
ರಾಹುಲ್ ಗಾಂಧಿ
Follow us on

ದೆಹಲಿ: ನ್ಯಾಷನಲ್ ಹೆರಾಲ್ಡ್ (National Herald) ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿ (Rahul Gandhi) ಸಮಯ ಕೇಳಿದ್ದಾರೆ. ಪ್ರಸ್ತುತ ವಿದೇಶ ಪ್ರವಾಸದಲ್ಲಿರುವ ಕಾರಣ ಹೆಚ್ಚಿನ ಸಮಯ ಬೇಕು ಎಂದು ರಾಹುಲ್ ಗಾಂಧಿ ಕೋರಿದ್ದಾರೆ. ಜೂನ್ 8ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಇಂದು (ಜೂನ್ 2) ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಸಮನ್ಸ್ ಜಾರಿ ಮಾಡಿತ್ತು.

ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ರಾಹುಲ್ ಗಾಂಧಿ ಮೇ 19ರಂದೇ ಭಾರತದಿಂದ ಲಂಡನ್​ಗೆ ತೆರಳಿದ್ದರು. ಮೇ 20ರಿಂದ 23ರ ನಡುವೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು. ಆದರೆ ಈವರೆಗೆ ಅವರು ಭಾರತಕ್ಕೆ ಹಿಂದಿರುಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು. ಜೂನ್ 5ರಂದು ಭಾರತಕ್ಕೆ ಹಿಂದಿರುಗಲಿರುವ ರಾಹುಲ್ ಗಾಂಧಿ, ನಂತರ ವಿಚಾರಣೆಗೆ ಹಾಜರಾಗಲು ಮತ್ತೊಂದು ದಿನಾಂಕ ಕೋರಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

‘ಬ್ರಿಟಿಷರಿಗೆ ಮತ್ತು ಅವರು ನಡೆಸಿದ ದೌರ್ಜನ್ಯಗಳಿಗೆ ಕಾಂಗ್ರೆಸ್​ ಎಂದೂ ಹೆದರಲಿಲ್ಲ. ಹೀಗಿರುವಾಗ ಇಡಿ ಜಾರಿ ಮಾಡಿದ ನೊಟೀಸ್​ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏಕೆ ಹೆದರಬೇಕು? ನಾವು ಎದುರಿಸುತ್ತೇವೆ, ಗೆಲ್ಲುತ್ತೇವೆ. ನಾವು ಹೆದರುವುದಿಲ್ಲ, ತಲೆ ಬಾಗುವುದಿಲ್ಲ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

‘ನಮ್ಮ ಇಬ್ಬರೂ ನಾಯಕರು ಇಡಿ ವಿಚಾರಣೆ ಎದುರಿಸಲಿದ್ದಾರೆ. ಇಂಥ ಬೆದರಿಕೆ ತಂತ್ರಗಳಿಂದ ನಮ್ಮನ್ನು ಮಣಿಸಲು ಆಗುವುದಿಲ್ಲ’ ಎಂದು ಕಾಂಗ್ರೆಸ್​ನ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದರು. ನಂತರ ಮತ್ತೋರ್ವ ವಕ್ತಾರ ರಣದೀಪ್ ಸುರ್ಜೆವಾಲಾ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ‘ರಾಜಕೀಯ ಪ್ರೇರಿತ ಪ್ರಕರಣ. ಸರ್ಕಾರವು ತನ್ನ ಅಧೀನದಲ್ಲಿರುವ ಏಜೆನ್ಸಿಗಳನ್ನು ಮನಸ್ಸಿಗೆ ಬಂದಂತೆ ಬಳಸಿಕೊಳ್ಳುತ್ತಿದೆ’ ಎಂದು ಹೇಳಿದ್ದರು.

ಪ್ರಕರಣದ ವಿವರ ನೀಡಿದ್ದ ರಣದೀಪ್ ಸುರ್ಜೆವಾಲಾ, ‘ನ್ಯಾಷನಲ್ ಹೆರಾಲ್ಡ್​ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸುತ್ತಿತ್ತು. ಹಲವು ವರ್ಷಗಳ ಅವಧಿಗೆ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ₹ 90 ಕೋಟಿಯಷ್ಟು ಹಣವನ್ನು ನೀಡಿತ್ತು. ನಷ್ಟದ ಮೊತ್ತ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ಷೇರುಗಳಾಗಿ ಪರಿವರ್ತಿಸಿ, ಯಂಗ್ ಇಂಡಿಯಾ ಹೆಸರಿನ ಕಂಪನಿಗೆ ವರ್ಗಾಯಿಸಲಾಯಿತು. ಇದು ಜಗತ್ತಿನೆಲ್ಲೆಡೆ ನಡೆಯುವ ಪ್ರಕ್ರಿಯೆ’ ಎಂದು ಸುರ್ಜೆವಾಲಾ ವಿವರಿಸಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ