ಸುಮಾರು 20-25 ಜನರ ಸಹಪಾಠಿಗಳು, ಸೀನಿಯರ್ಸ್ಗಳೊಂದಿಗೆ ಖಾರ್ಕೀವ್ನ ಬಂಕರ್ವೊಂದರಲ್ಲಿ ಇದ್ದ ಹಾವೇರಿ ಮೂಲದ ನವೀನ್ ಇಂದು ಹಸಿವು ತಡೆಯಲಾರದೆ ಅಲ್ಲಿಂದ ಹೊರಬಿದ್ದು, ರಷ್ಯಾ ದಾಳಿಗೆ ಜೀವತೆತ್ತಿದ್ದಾರೆ. ಉಕ್ರೇನ್ನಲ್ಲಿ ಎಂಬಿಬಿಎಸ್ 4ನೇ ವರ್ಷದಲ್ಲಿ ಓದುತ್ತಿದ್ದ ನವೀನ್ ಇನ್ನೊಂದು ವರ್ಷ ಓದಿದ್ದರೆ ಕೋರ್ಸ್ ಮುಗಿಯುತ್ತಿತ್ತು. ಹಾವೇರಿ ಜಿಲ್ಲೆಯ ಚಳಗೇರಿ ನಿವಾಸಿಯಾದ ನವೀನ್, ಅವರ ಅಪ್ಪ-ಅಮ್ಮನಿಗೆ ಎರಡನೇ ಮಗ. ಇವರ ಅಣ್ಣ ಹರ್ಷ ಬೆಂಗಳೂರಿನಲ್ಲಿಯೇ ಪಿಎಚ್ಡಿ ಮಾಡುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ, ಭಾರತಕ್ಕೆ ಬಂದು ಒಳ್ಳೆಯ ವೈದ್ಯನಾಗಬೇಕು. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕನಸು ಹೊತ್ತಿದ್ದ ನವೀನ್, ರಷ್ಯಾದ ಆಕ್ರಮಣಕ್ಕೆ ಕಣ್ಮುಚ್ಚುವಂತಾಗಿದ್ದು ನಿಜಕ್ಕೂ ದುರಂತ. ಇಲ್ಲಿ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಮುಂಜಾನೆ ಏನಾಯ್ತು?
ಇಂದು ಮುಂಜಾನೆ ಏನೆಲ್ಲ ಆಯ್ತು. ನವೀನ್ ಬಂಕರ್ನಿಂದ ಹೊರಹೋಗಿದ್ದು, ಎಷ್ಟೊತ್ತಿಗೆ ಮತ್ತು ಯಾಕೆ ಎಂಬ ಬಗ್ಗೆ ಅವರೊಂದಿಗೆ ಅದೇ ಬಂಕರ್ನಲ್ಲಿದ್ದ ಅಮಿತ್ ಎಂಬುವರು ಟಿವಿ 9 ಕನ್ನಡ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಅಮಿತ್ ಕೂಡ ಹಾವೇರಿಯವರೇ ಆಗಿದ್ದು ಉಕ್ರೇನ್ನಲ್ಲಿ ಎಂಬಿಬಿಎಸ್ 5ನೇ ವರ್ಷದಲ್ಲಿ ಓದುತ್ತಿದ್ದಾರೆ. ನವೀನ್ ನಿಧನಕ್ಕೆ ಕಣ್ಣೀರು ಹಾಕುತ್ತಿರುವ ಅವರು ಎಲ್ಲ ಮಾಹಿತಿ ಹಂಚಿಕೊಂಡಿದ್ದಾರೆ.
‘ನಾನು ನಿನ್ನ ರಾತ್ರಿ ಮಲಗುವುದು 3 ಗಂಟೆ ಮೇಲಾಯಿತು. ಹಾಗಾಗಿ ಬೆಳಗ್ಗೆ ಏಳುವುದು 8ಗಂಟೆ ಮೇಲಾಯಿತು. ಆದರೆ ನವೀನ್ 6ಗಂಟೆಗೇ ಎದ್ದಿದ್ದ. ಹಾಗೇ ಎದ್ದವನು ತಿನ್ನಲು ಏನಾದರೂ ತರಲು ನಮ್ಮ ಬಂಕರ್ನಿಂದ 50 ಮೀಟರ್ ದೂರದಲ್ಲಿರುವ ಒಂದು ಸೂಪರ್ ಮಾರ್ಕೆಟ್ಗೆ ಹೋಗಿದ್ದ. ಅಲ್ಲಿ ತುಂಬ ಜನಸಂದಣಿ ಇದ್ದಿದ್ದರಿಂದ ಅವನೂ ಕಾಯಬೇಕಿತ್ತು. ಸುಮಾರು 7.58ರ ಹೊತ್ತಿಗೆ ನಮ್ಮೊಂದಿಗೇ ಇದ್ದ ಶ್ರೀಕಾಂತ್ ಎಂಬುವನಿಗೆ ನವೀನ್ ಮೆಸೇಜ್ ಕಳಿಸಿ, ಅಕೌಂಟ್ನಲ್ಲಿ ಹಣ ಕಡಿಮೆ ಇದೆ. ಸ್ವಲ್ಪ ದುಡ್ಡು ಕಳಿಸು ಎಂದ. ಹಾಗೇ ಈತ ಕಳಿಸಿದ. ಸುಮಾರು 8.10ರ ಹೊತ್ತಿಗೆ ಶ್ರೀಕಾಂತ್ ತಿರುಗಿ ನವೀನ್ ಮೊಬೈಲ್ಗೆ ಕರೆ ಮಾಡಿದರೆ ಅವನು ಪಿಕ್ ಮಾಡಲಿಲ್ಲ. ಆದರೆ ಕೆಲವೇ ಕ್ಷಣದಲ್ಲಿ ಅಲ್ಲಿಯೇ ಇದ್ದ, ಇನ್ಯಾರೋ ಹಿ ಈಸ್ ನೋ ಮೋರ್ ಎಂಬ ಮೆಸೇಜ್ ಕಳಿಸಿದರು. ಅವರು ಉಕ್ರೇನ್ವರಾಗಿದ್ದು ರಷ್ಯನ್ ಭಾಷೆ ಮಾತನಾಡುವವರು. ಇಂಗ್ಲಿಷ್ನಲ್ಲಿ ಮೆಸೇಜ್ ಕಳಿಸಿದ್ದರು’ ಎಂದು ಗದ್ಗದಿತ ಧ್ವನಿಯಲ್ಲಿ ಅಮಿತ್ ವಿವರಣೆ ನೀಡಿದ್ದಾರೆ.
ಅಮಿತ್, ನವೀನ್ ಮತ್ತಿತರ 25 ಮಂದಿ ಆ ಬಂಕರ್ನಲ್ಲಿದ್ದು 6 ದಿನ ಕಳೆದಿದೆ. ನಾಳೆಯಷ್ಟರಲ್ಲಿ ನಾವೂ ಹೇಗಾದರೂ ಸರಿ ಅಲ್ಲಿಂದ ಹೊರಡಬೇಕು. ರಿಸ್ಕ್ ತೆಗೆದುಕೊಳ್ಳದೆ ಇಲ್ಲಿಯೇ ಕುಳಿತಿದ್ದರೆ ಉಳಿಗಾಲವಿಲ್ಲ ಎಂಬುದನ್ನು ಮಾತನಾಡಿಕೊಂಡಿದ್ದೆವು. ಮೊದಮೊದಲು ತಿನ್ನಲು ಏನಾದರೂ ಸಿಗುತ್ತಿತ್ತು. ಈಗಂತೂ ಸ್ನಿಕ್ಕರ್ಸ್, ಚಾಕಲೇಟ್, ಬಿಸ್ಕಟ್ಗಳನ್ನು ತಿನ್ನುತ್ತಿದ್ದೇವೆ. ಇಲ್ಲಿ ಅನೇಕ ಜ್ಯೂನಿಯರ್ಸ್ಗಳಿದ್ದಾರೆ. ಅವರಿಗೆ ಪಾಪ ಭಾಷೆಯೂ ಬರುವುದಿಲ್ಲ. ಈಗ ನೋಡಿದರೆ ನವೀನ್ ಮೃತಪಟ್ಟಿದ್ದಾನೆ. ಏನು ಮಾಡಬೇಕು ಎಂದೇ ತಿಳಿಯುತ್ತಿಲ್ಲ. ಇಲ್ಲಿಂದ ಹೊರಬಿದ್ದರೆ ಬದುಕುತ್ತೇವಾ ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನವೀನ್ ತುಂಬ ಒಳ್ಳೆಯ ಹುಡುಗನಾಗಿದ್ದ, ಓದಿನಲ್ಲೂ ಚುರುಕಾಗಿದ್ದು, ಟಾಪರ್ ಆಗಿದ್ದ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: Ukraine-Russia War: ಹಿಟ್ಲರ್ ಆಕ್ರಮಣದ ಬಳಿಕ ಇದೇ ಮೊದಲ ಬಾರಿ ಭೀಕರ ಬಾಂಬ್ ದಾಳಿಗೆ ತುತ್ತಾದ ಕೀವ್, ಕಾರ್ಖಿವ್ ನಗರಗಳು
Published On - 5:36 pm, Tue, 1 March 22