Manipur Polls 2022: ಕಾಂಗ್ರೆಸ್ ಮಣಿಪುರವನ್ನು ಸಂಪೂರ್ಣ ಲೂಟಿ ಮಾಡಿದೆ; ವಿಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Manipur Polls 2022: ಕಾಂಗ್ರೆಸ್ ಮಣಿಪುರವನ್ನು ಸಂಪೂರ್ಣ ಲೂಟಿ ಮಾಡಿದೆ; ವಿಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ನರೇಂದ್ರ ಮೋದಿ
Follow us
| Updated By: ಸುಷ್ಮಾ ಚಕ್ರೆ

Updated on: Mar 01, 2022 | 6:56 PM

ಗುವಾಹಟಿ: ಮಣಿಪುರದಲ್ಲಿ ಎರಡನೇ ಹಂತದ ಮತದಾನಕ್ಕಾಗಿ ಬಿಜೆಪಿಯ (BJP) ಪ್ರಚಾರವನ್ನು ಪ್ರಾರಂಭಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಪ್ರತಿಪಕ್ಷ ಕಾಂಗ್ರೆಸ್‌ಗೆ ವಾಗ್ದಾಳಿ ನಡೆಸಿದ್ದಾರೆ. ವರ್ಚುವಲ್ ಪೋಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆ ಪಕ್ಷದ ಪ್ರಮುಖ ನಾಯಕನನ್ನು “ಮಿಸ್ಟರ್ 10 ಪರ್ಸೆಂಟ್” ಎಂದು ಕರೆಯಲಾಗುತ್ತಿತ್ತು ಎಂದು ಟೀಕಿಸಿದ್ದಾರೆ. 2017ರ ವಿಧಾನಸಭಾ ಚುನಾವಣೆಯ (Assembly Elections) ಪೂರ್ವದಲ್ಲಿ ಬಿಜೆಪಿಯು ಇಬೋಬಿ ಸಿಂಗ್ ಅವರು ಎಲ್ಲಾ ಸರ್ಕಾರಿ ಯೋಜನೆಗಳಿಂದ ಶೇ.10ರಷ್ಟು ಭಾಗವನ್ನು ಜೇಬಿಗಿಳಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು. ದೊಡ್ಡ ಮೊತ್ತದ ಹಣವನ್ನು ಲಂಚವಾಗಿ ನೀಡುವವರಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಆರೋಪವೂ ಇತ್ತು, ಅದರಿಂದ ಕೇವಲ ಶೇ.10ರಷ್ಟು ಜನರಿಗೆ ಮಾತ್ರ ಅನುಕೂಲವಾಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು.

ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಮುಖ್ಯಮಂತ್ರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ. ಆದರೆ, ಈ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ನೇರವಾಗಿ ಕಾಂಗ್ರೆಸ್ ನಾಯಕನ ಹೆಸರನ್ನು ಉಲ್ಲೇಖಿಸದಿದ್ದರೂ ಮೂರು ಬಾರಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧದ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಮಣಿಪುರವನ್ನು ಅಭಿವೃದ್ಧಿಪಡಿಸಲಿಲ್ಲ, ಅದು ಮಣಿಪುರವನ್ನು ಶಾಂತಿಯಿಂದ ದೂರವಿಟ್ಟಿತು. ಕಾಂಗ್ರೆಸ್ ಮಣಿಪುರದಲ್ಲಿ ಉಗ್ರಗಾಮಿತ್ವವನ್ನು ಉತ್ತೇಜಿಸಿತು. ಅಟಲ್ ಬಿಹಾರಿ ವಾಜಪೇಯಿ ಅವರು ಈಶಾನ್ಯಕ್ಕೆ ಮೀಸಲಾದ ಇಲಾಖೆಯನ್ನು ಸ್ಥಾಪಿಸಿದ್ದರು. ಆದರೆ 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಅವರು ಆ ಇಲಾಖೆಯನ್ನು ನಿಷ್ಕ್ರಿಯಗೊಳಿಸಿದರು. ಕಾಂಗ್ರೆಸ್ ದುರ್ಬಲಗೊಳ್ಳುವುದರೊಂದಿಗೆ ಅವರ ಒಡೆದು ಆಳುವ ನೀತಿಯಿಂದ ಮಣಿಪುರ ಕೂಡ ದುರ್ಬಲಗೊಂಡಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರವೇ ಮಣಿಪುರವನ್ನು ದೇಶದ ರೈಲ್ವೆ ಜಾಲಕ್ಕೆ ಸಂಯೋಜಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ಮಣಿಪುರವು ಕೌಶಲ್ಯ ಅಭಿವೃದ್ಧಿ, ಸ್ಟಾರ್ಟ್‌ಅಪ್‌ಗಳು ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು 100 ಕೋಟಿ ರೂ. ಯೋಜನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಮಣಿಪುರ ಕೌಶಲ ವಿಶ್ವವಿದ್ಯಾಲಯವನ್ನೂ ರೂಪಿಸಲಿದ್ದೇವೆ ಎಂದಿದ್ದಾರೆ.

ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲನೆಯದು ಫೆಬ್ರವರಿ 28ರಂದು ನಡೆದಿದೆ. ಎರಡನೆ ಹಂತದ ಮತದಾನ ಮಾರ್ಚ್ 5ರಂದು ನಡೆಯಲಿದೆ. 60 ಸದಸ್ಯರ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆಯುತ್ತಿವೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Manipur Assembly Polls: ಮಣಿಪುರ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಗುಂಡು ಹಾರಿಸಿಕೊಂಡು ಸಾವು; ಆತ್ಮಹತ್ಯೆಯಲ್ಲ

Manipur Assembly Polls: ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ಇಂದು; 173 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ