ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ

1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ಇಬ್ಬರು ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ, ಒಪ್ಪಂದ ಮಾಡಿಕೊಂಡಿದ್ದರು ಎಂದು ದೇವೇಂದ್ರ ಫಡ್ನವೀಸ್​ ಆರೋಪಿಸಿದರು.

ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ
ದೇವೆಂದ್ರ ಫಡ್ನವೀಸ್​
Follow us
TV9 Web
| Updated By: Lakshmi Hegde

Updated on:Nov 09, 2021 | 3:38 PM

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ದೀಪಾವಳಿಗೂ ಮೊದಲು ಒಂದು ಮಾತಾಡಿದ್ದರು. ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ಗೆ ಭೂಗತ ಲೋಕದ ಸಂಪರ್ಕವಿದೆ ಎಂಬುದನ್ನು ನಾನು ದೀಪಾವಳಿಯ ನಂತರ, ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇನೆ ಎಂದಿದ್ದರು. ಅದರಂತೆ ಇಂದು ಸುದ್ದಿಗೋಷ್ಠಿ ನಡೆಸಿ,  ನವಾಬ್​ ಮಲ್ಲಿಕ್​ಗೆ ಭೂಗತ ಜಗತ್ತಿನ ನಂಟಿದೆ ಎಂಬುದನ್ನು ಪುನರುಚ್ಚರಿಸಿದರು. ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ಪ್ರಸ್ತುತಪಡಿಸಿದ್ದಾರೆ.

ನವಾಬ್​ ಮಲ್ಲಿಕ್​ ಭೂಗತ ಜಗತ್ತಿನ ನಂಟಿನ ಕುರಿತು ದೀಪಾವಳಿ ನಂತರ ಹೇಳುತ್ತೇನೆ ಎಂದು ಹೇಳಿದ್ದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆಯಲು ಸ್ವಲ್ಪ ಸಮಯ ಹಿಡಿಯಿತು ಎಂದು ಹೇಳಿದ ದೇವೇಂದ್ರ ಫಡ್ನವೀಸ್​, 1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ಇಬ್ಬರು ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ, ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿದರು. ಕುರ್ಲಾದ ಎಲ್​ಬಿಎಸ್​ ರಸ್ತೆಯಲ್ಲಿ 2.8 ಎಕರೆ ವಿಸ್ತೀರ್ಣದ ಪ್ಲಾಟ್​ ಇದೆ. ಅದನ್ನು ಗೌವಾಲಾ ಕಾಂಪೌಂಡ್​ ಎಂದು ಕರೆಯಲಾಗುತ್ತದೆ. ಈ ಆಸ್ತಿಯನ್ನು ನವಾಬ್​ ಮಲ್ಲಿಕ್​ ಕುಟುಂಬಕ್ಕೆ ಸೇರಿದ  ಸಾಲಿಡಸ್​ ಇನ್ವೆಸ್ಟ್​ಮೆಂಟ್​ ಪ್ರೈವೇಟ್​ ಲಿಮಿಟೆಡ್​ ಎಂಬ ಕಂಪನಿಯ ಮೂಲಕ ಖರೀದಿಸಲಾಗಿದೆ. ಅಂದಹಾಗೆ ಈ ಆಸ್ತಿಯನ್ನು 1993ರ ಬಾಂಬೆ ಸ್ಫೋಟದ ಇಬ್ಬರು ಆರೋಪಿಗಳಾದ, ಭೂಗತ ಪಾತಕಿಗಳಾದ ಸಲೀಂ ಪಟೇಲ್​ ಮತ್ತು ಸರ್ದಾರ್ ಶಹಾಬ್​ ಅಲಿ ಖಾನ್​​ರಿಂದ ಖರೀದಿಸಲಾಗಿದೆ. ಆಸ್ತಿ ಖರೀದಿ 30 ಲಕ್ಷ ರೂ.ಗೆ ಒಪ್ಪಂದವಾಗಿತ್ತು. ಆದರೆ ಇವರು ಕೇವಲ 20 ಲಕ್ಷ ರೂ.ಪಾವತಿಸಿದ್ದಾರೆ ಎಂದು ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

ನವಾಬ್​ ಮಲ್ಲಿಕ್​ ಸಚಿವರಾಗಿದ್ದಾಗಲೇ ಅಂದರೆ 2003ರಿಂದ 2005ರ ಅವಧಿಯಲ್ಲಿ ಈ ಆಸ್ತಿ ಡೀಲ್​ ಆಗಿದೆ. ಸಲೀಂ ಪಟೇಲ್​ ಯಾರೆಂದು ನವಾಬ್​ಗೆ ಗೊತ್ತಿರಬೇಕಲ್ಲ? ಸ್ಫೋಟ ಮಾಡಿದ ಆರೋಪಿಗಳಿಂದ ಭೂಮಿ ಯಾಕೆ ಖರೀದಿಸಬೇಕು? ಅವರ್ಯಾಕೆ ಮೂರು ಎಕರೆ ಪ್ಲಾಟ್​​ನ್ನು 30 ಲಕ್ಷ ರೂಪಾಯಿಗೆ ಮಾರಾಟ ಮಾಡಿದರು ಎಂದು ದೇವೇಂದ್ರ ಫಡ್ನವೀಸ್​ ಪ್ರಶ್ನಿಸಿದರು. ಇದು ಭೂಗತ ಲೋಕದೊಂದಿಗೆ ನೇರವಾದ ಸಂಪರ್ಕವೇ ಆಗಿದೆ. ಆರ್​ಡಿಎಕ್ಸ್​ ತಂದು, ಸ್ಫೋಟ ಮಾಡುವವರ ಜತೆ ವ್ಯವಹಾರ ಮಾಡಿದ್ದೇಕೆ? ಇದಕ್ಕೆಲ್ಲ ನನ್ನ ಬಳಿ ಸಾಕ್ಷಿಯಿದೆ. ಇದನ್ನು ನಾನು ಸಂಬಂಧಪಟ್ಟ ಆಡಳಿತಕ್ಕೆ ಮತ್ತು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ಗೆ ಕಳಿಸುತ್ತೇನೆ ಎಂದು ಹೇಳಿದರು.

ಈ ಸಲೀಂ ಪಟೇಲ್​ ಗ್ಯಾಂಗ್​ಸ್ಟರ್​ ದಾವೂದ್ ಇಬ್ರಾಹಿಂನ ಸಹಾಯಕನೇ ಆಗಿದ್ದಾನೆ. ದಾವೂಬ್​ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕಾರ್​​ ಕಾರಿನ ಡ್ರೈವರ್ ಆಗಿದ್ದ. 1993ರ ಮುಂಬೈ ಸ್ಫೋಟದ ಮಾಸ್ಟರ್​ ಮೈಂಡ್​ ಆಗಿರುವ ದಾವೂದ್​ ಇಬ್ರಾಹಿಂ ಆಪ್ತ ಸಲೀಂ ಪಟೇಲ್​ ಕೂಡ ಭೂಗತ ಜಗತ್ತಿನಲ್ಲಿ ಇದ್ದವನೇ ಆಗಿದ್ದಾನೆ.  ಈ ಸಲೀಂ ಪಟೇಲ್​ ಮತ್ತು ಹಸೀನಾ ಇಬ್ಬರೂ ಸೇರಿ ಭೂ ಮಾಫಿಯಾ ನಡೆಸುತ್ತಿದ್ದರು. ಭೂಮಿ ಕಬಳಿಸುವುದೇ ಅವರ ಕಾಯಕವಾಗಿತ್ತು. ಪವರ್​ ಆಫ್​ ಅಟಾರ್ನಿಯ ದಾಖಲೆಗಳನ್ನೆಲ್ಲ ಸಲೀಂ ಪಟೇಲ್​ ಹೆಸರಿನಲ್ಲಿಯೇ ಮಾಡಲಾಗಿದೆ ಎಂದು ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

ಆಸ್ತಿ ಖರೀದಿ ವೇಳೆ ಪ್ರತಿ ಚದರ್ ಅಡಿಗೆ 25 ರೂಪಾಯಿಯೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ನಂತರ ಪ್ರತಿ ಚದರ್ ಅಡಿಗೆ 15 ರೂ.ನಂತೆ ಖರೀದಿ ಮಾಡಲಾಗಿದೆ. ಈ ಒಪ್ಪಂದಕ್ಕೆ ಸಹಿಹಾಕಿದವರಲ್ಲಿ ಒಬ್ಬರು ನವಾಬ್​ ಮಲ್ಲಿಕ್​ ಪುತ್ರ ಫಾರಜ್​ ಮಲ್ಲಿಕ್​ ಎಂದೂ ಫಡ್ನವೀಸ್​ ಬಹಿರಂಗಪಡಿಸಿದ್ದಾರೆ. ಮೂರು ಎಕರೆಗೆ 30 ಲಕ್ಷ ರೂ.ಎಂದು ಆಗಿದ್ದರೂ, ನಂತರ ಪಾವತಿಯಾಗಿದ್ದು ಕೇವಲ 20 ಲಕ್ಷ ರೂ. ಭೂಗತ ಪಾತಕಿಗಳ ಆಸ್ತಿ ರಕ್ಷಣೆಗಾಗಿಯಷ್ಟೇ ಈ ವ್ಯವಹಾರ ನಡೆದಿತ್ತು ಎಂದೂ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ನವಾಬ್​ ಮಲ್ಲಿಕ್​ ಪುತ್ರನ ಪ್ರತಿಕ್ರಿಯೆ ದೇವೇಂದ್ರ ಫಡ್ನವೀಸ್ ಆರೋಪಕ್ಕೆ ನವಾಬ್​ ಮಲ್ಲಿಕ್​ ಪುತ್ರ ಫಾರಜ್​ ಮಲ್ಲಿಕ್​ ಪ್ರತಿಕ್ರಿಯೆ ನೀಡಿದ್ದಾರೆ. ಸಲೀಂ ಪಟೇಲ್​ ಆಸ್ತಿಗೆ ನಾನು ಗೇಣಿದಾರನಾಗಿದ್ದೆ. ಸುಮಾರು 400 ಮಂದಿ ತೆರಿಗೆ ಪಾವತಿ ಮಾಡುತ್ತಿದ್ದರು. ಅದಕ್ಕೆಲ್ಲ ದಾಖಲೆಯಿದೆ ಮತ್ತು ಅದನ್ನು ನೋಡಿ ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯ ಮಹಾರಾಷ್ಟ್ರ ಪೊಲೀಸರಿಗೆ ಇದೆ. ನಾನೇನೂ ತಪ್ಪು ಮಾಡಿಲ್ಲ. ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಇದೆಲ್ಲ ಶುರುವಾಗಿದ್ದು ಮುಂಬೈ ಡ್ರಗ್ಸ್​ ಕೇಸ್​​ ವಿಚಾರದಲ್ಲಿ. ಈಗಾಗಲೇ ಬಂಧಿತನಾಗಿರುವ ಡ್ರಗ್​ ಪೆಡ್ಲರ್​​ನೊಬ್ಬ ದೇವೇಂದ್ರ ಫಡ್ನವೀಸ್​ ಮತ್ತು ಅವರ ಪತ್ನಿಯೊಂದಿಗೆ ನಿಂತಿರುವ ಫೋಟೋವನ್ನು ನವಾಬ್​ ಮಲ್ಲಿಕ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ವಾಗ್ದಾಳಿ ನಡೆಸಿದ್ದರು. ಡ್ರಗ್ಸ್​ ಸೇವನೆ, ಸಾಗಾಟಗಳೆಲ್ಲ ಹೆಚ್ಚಾಗಿದ್ದೇ ದೇವೇಂದ್ರ ಫಡ್ನವೀಸ್​ ಆಡಳಿತದಲ್ಲಿ ಎಂದು ಆರೋಪಿಸಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ದೇವೇಂದ್ರ ಫಡ್ನವೀಸ್​, ಒಂದು ಸಂಗೀತ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಫೋಟೋ ಅದು. ಹಾಗಂತ ನಮಗೆ ನಂಟಿದೆ ಎಂದು ಅರ್ಥವಲ್ಲ. ಆದರೆ ದೀಪಾವಳಿ ನಂತರ ನವಾಬ್​ ಮಲ್ಲಿಕ್​ಗೆ ಸಂಬಂಧಿಸಿದ ಬಹುದೊಡ್ಡ ವಿಷಯವನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದರು.

ಇದನ್ನೂ ಓದಿ: ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಪ್ರಮೋದ್ ಮುತಾಲಿಕ್

Published On - 3:11 pm, Tue, 9 November 21