ಸುಭಾಷ್ ಚಂದ್ರ ಬೋಸ್-ಮಹಾತ್ಮ ಗಾಂಧಿ ನಡುವೆ ಸಂಬಂಧ ಹೇಗಿತ್ತು? ಕುತೂಹಲಕಾರಿ ವಿಷಯ ಹೇಳಿದ ನೇತಾಜಿ ಪುತ್ರಿ ಅನಿತಾ ಬೋಸ್
ನನ್ನ ತಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ನಾಯಕರು. ಬರಿ ಇವರಿಬ್ಬರೇ ಅಲ್ಲ, ಲಕ್ಷಾಂತರ ಭಾರತೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅನಿತಾ ಬೋಸ್ ಹೇಳಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಇತ್ತೀಚೆಗೆ ಭರ್ಜರಿ ಸುದ್ದಿಯಲ್ಲಿದ್ದಾರೆ. ಅವರು ನೇರವಾಗಿ ಮಹಾತ್ಮ ಗಾಂಧಿ ಮತ್ತವರ ಸ್ವಾತಂತ್ರ್ಯ ಹೋರಾಟದ ಕ್ರಮವನ್ನೇ ಪ್ರಶ್ನಿಸುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೇ, ಮತ್ತೊಂದು ವರ್ಗದ ಜನರ ಪ್ರಶಂಸೆಗೂ ಪಾತ್ರರಾಗಿದ್ದಾರೆ. ನಿನ್ನೆ ಕಂಗನಾ ರಣಾವತ್ ಇನ್ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಹಾಕಿದ್ದರು. ಸ್ವಾತಂತ್ರ್ಯ ಹೋರಾಟ ಕಾಲದ ಅಂದರೆ 1940ರ ಸುಮಾರಿಗೆ ಪ್ರಕಟವಾದ ಲೇಖನವೊಂದರ ಫೋಟೋವನ್ನು ಕಂಗನಾ ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಗಾಂಧಿ ಮತ್ತು ಇತರ ಮುಖಂಡರು ನೇತಾಜಿ ಸುಭಾಷ್ ಚಂದ್ರ ಬೋಸ್ರನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಾಗಿದ್ದಾರೆ ಎಂಬ ತಲೆ ಬರಹವುಳ್ಳ ಲೇಖನ ಅದು. ಅದನ್ನು ಶೇರ್ ಮಾಡಿಕೊಂಡಿದ್ದ ನಟಿ, ‘ಒಂದೋ ನೀವು ಗಾಂಧಿಯ ಅಭಿಮಾನಿಯಾಗಬೇಕು..ಇಲ್ಲವೇ ನೇತಾಜಿ ಸುಭಾಷ್ ಚಂದ್ರ ಬೋಸ್ರ ಅನುಯಾಯಿಯಾಗಬೇಕು. ಇವರಿಬ್ಬರನ್ನೂ ಏಕಕಾಲಕ್ಕೆ ಇಷ್ಟಪಡಲು ಸಾಧ್ಯವೇ ಇಲ್ಲ. ನೀವು ಸರಿಯಾಗಿ ನಿರ್ಧಾರ ಮಾಡಿ, ಆಯ್ಕೆ ಮಾಡಿಕೊಳ್ಳಿ’ ಎಂಬ ಸಾಲುಗಳನ್ನು ಕ್ಯಾಪ್ಷನ್ ಆಗಿ ಬರೆದಿದ್ದರು.
ಅಷ್ಟೇ ಅಲ್ಲ, ಕಂಗನಾ ರಣಾವತ್ ಗಾಂಧಿ ಮತ್ತು ನೆಹರೂ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಯಾರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾರೋ ಅವರನ್ನು ಮಾಲೀಕರಿಗೆ (ಬ್ರಿಟಿಷರಿಗೆ) ಒಪ್ಪಿಸಲು ಅವರಿಬ್ಬರೂ ತುದಿಗಾಲಿನಲ್ಲಿಯೇ ಇರುತ್ತಿದ್ದರು. ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ಗೆ ಗಾಂಧಿ ಎಂದಿಗೂ ಬೆಂಬಲ ನೀಡಲಿಲ್ಲ ಎಂಬಿತ್ಯಾದಿ ಆರೋಪಗಳನ್ನು ನಿರ್ಭಿಡೆಯಿಂದ ಮಾಡಿದ್ದರು. ಅವರ ಇನ್ಸ್ಟಾಗ್ರಾಂ ಪೋಸ್ಟ್ ಸಂಚಲನ ಮೂಡಿಸಿದ ಹೊತ್ತಲ್ಲೇ, ಸುಭಾಷ್ ಚಂದ್ರ ಬೋಸ್ ಪುತ್ರಿ ಅನಿತಾ ಬೋಸ್ ಪಾಫ್ (Anita Bose Pfaff) ಇನ್ನೊಂದು ಕುತೂಹಲಕಾರಿ ಮಾಹಿತಿ ಹೊರಹಾಕಿದ್ದಾರೆ. ಇಂಡಿಯಾ ಟುಡೆ ಮಾಧ್ಯಮದ ಜತೆ ಮಾತನಾಡಿದ ಅನಿತಾ ಬೋಸ್, ನನ್ನ ತಂದೆ ಮತ್ತು ಗಾಂಧಿ ನಡುವೆ ಇದ್ದಿದ್ದ ಸಂಬಂಧವನ್ನು ವಿವರಿಸುವುದು ಕಷ್ಟ. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇದ್ದವು ಎಂದು ಹೇಳಿದ್ದಾರೆ.
ಇಬ್ಬರೂ ಮಹಾನ್ ನಾಯಕರು.. ನನ್ನ ತಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ನಾಯಕರು. ಬರಿ ಇವರಿಬ್ಬರೇ ಅಲ್ಲ, ಲಕ್ಷಾಂತರ ಭಾರತೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿ ಅನೇಕರ ಹೆಸರು ಯಾರಿಗೂ ಗೊತ್ತಿಲ್ಲ. ಈಗ ನನ್ನ ತಂದೆಯ ಕೊಡುಗೆ ಜಾಸ್ತಿ ಇದೆ, ಗಾಂಧಿ ಕೊಡುಗೆ ಕಡಿಮೆ ಅಥವಾ ಗಾಂಧಿಯೊಬ್ಬರಿಂದಲೇ ಸ್ವಾತಂತ್ರ್ಯ ಬಂತು, ಮತ್ಯಾರೂ ಹೋರಾಡಲಿಲ್ಲ ಎಂಬಿತ್ಯಾದಿ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಮಹಾತ್ಮ ಗಾಂಧಿ ಮತ್ತು ನನ್ನ ತಂದೆ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಇದ್ದವು. ಆದರೆ ಗಾಂಧಿ ಎಂದಿಗೂ ನೇತಾಜಿಯವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ವಾದ-ಪ್ರತಿವಾದಗಳು ಸಹಜವಾಗಿಯೇ ಇದ್ದವು. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯವರ ಅಹಿಂಸಾ ತತ್ವದ ಪಾಲು ಜಾಸ್ತಿ ಇದೆ ಎಂಬುದು ಸತ್ಯವಲ್ಲ. ನನ್ನ ತಂದೆ ನೇತಾಜಿ ಮತ್ತು ಭಾರತದ ರಾಷ್ಟ್ರೀಯ ಸೇನೆ (INA)ಯ ಕೊಡುಗೆಯೂ ಅಪಾರ ಎಂದಿದ್ದಾರೆ. ಹಾಗೇ, ಕೆಲವು ವಿಷಯಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದು ಒಳಿತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಎಸ್ಪಿ ಕಾಲ್ ಮಾಡಿ ಪೊಲೀಸರು ದನ ಕಾಯುತ್ತಿದ್ರಾ ಎಂದು ಗರಂ ಆದ ಈಶ್ವರಪ್ಪ