ಕೋವಿಡ್ 19 ತಡೆಗಟ್ಟಲು ಡಿಸೆಂಬರ್ ಒಂದರಿಂದ ಜಾರಿಯಾಗಲಿದೆ ಹೊಸ ಮಾರ್ಗಸೂಚಿ
ನೂತನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದ್ದು, ಕೊರೊನಾ ಹಾವಳಿ ಹೆಚ್ಚಿರುವಲ್ಲಿ ನಿಯಮಗಳು ಕಠಿಣವಾಗಿರಲಿವೆ.
ದೆಹಲಿ: ಕೋವಿಡ್ 19 ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ರೂಪಿಸಿದ್ದು ಡಿಸೆಂಬರ್ 1ರಿಂದ ಹೊಸ ನಿಯಮಗಳು ಜಾರಿಯಾಗಲಿವೆ. ನೂತನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದ್ದು, ಕೊರೊನಾ ಹಾವಳಿ ಹೆಚ್ಚಿರುವಲ್ಲಿ ನಿಯಮಗಳು ಕಠಿಣವಾಗಿರಲಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಕಂಟೈನ್ಮೆಂಟ್ ವಲಯಗಳತ್ತ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿರುವ ಕಾರಣ ಕಂಟೈನ್ಮೆಂಟ್ ವಲಯಗಳೆಂದು ಗುರುತಿಸಿಕೊಂಡ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಸಂಚಾರ ನಿರ್ಬಂಧನೆಗೊಳ್ಳಲಿದೆ. ಆರೋಗ್ಯ ಕಾರ್ಯಕರ್ತರಿಗೆ ಮನೆಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲು ಸೂಚಿಸಿದ್ದು ಯಾವುದೇ ವ್ಯಕ್ತಿಗೆ ಪಾಸಿಟಿವ್ ಲಕ್ಷಣಗಳು ಕಂಡುಬಂದಲ್ಲಿ 72 ಗಂಟೆಯ ಒಳಗಾಗಿ ಅವರ ಸಂಪರ್ಕಿತರನ್ನು ಗುರುತಿಸಿ 14 ದಿನಗಳ ಕ್ವಾರಂಟೈನ್ಗೆ ಒಳಪಡಿಸಬೇಕಿದೆ.
ಸ್ಥಳೀಯ ಆಡಳಿತ ವರ್ಗಕ್ಕೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದ್ದು ಅವಶ್ಯಕತೆ ಕಂಡುಬಂದಲ್ಲಿ ನೈಟ್ ಕರ್ಫ್ಯೂ ವಿಧಿಸುವ ಅಧಿಕಾರವನ್ನೂ ನೀಡಲಾಗಿದೆ. ಆದರೆ, ಕೇಂದ್ರದ ಅನುಮತಿಯ ಹೊರತಾಗಿ ಲಾಕ್ಡೌನ್ ಮಾಡುವಂತಿಲ್ಲ ಎಂಬುದನ್ನೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದ್ದು ಈ ಮಾರ್ಗಸೂಚಿ ಡಿಸೆಂಬರ್ 31ರ ತನಕವೂ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಯಾವುದಕ್ಕೆ ಅನುಮತಿ? * ಗೃಹ ಸಚಿವಾಲಯದ ಆದೇಶದಂತೆ ವಿಮಾನಯಾನ ಕೈಗೊಳ್ಳಬಹುದು. * ಕ್ರೀಡಾ ಸ್ಪರ್ಧಾಳುಗಳಿಗೆ ಮಾತ್ರ ಈಜುಕೊಳ ಬಳಸಲು ಅನುಮತಿ. * ಚಿತ್ರಮಂದಿರಗಳಲ್ಲಿ ಸಾಮರ್ಥ್ಯಕ್ಕಿಂತ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ. * ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಮನರಂಜನಾ ಕಾರ್ಯಕ್ರಮಗಳಲ್ಲಿ ಶೇ.50ರಷ್ಟು ಜನ ಮಾತ್ರ ಭಾಗವಹಿಸಬಹುದು.