ನವದೆಹಲಿ, ಸೆಪ್ಟೆಂಬರ್ 6: ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಇಲಾಖೆಗಳಲ್ಲಿ ನಡೆಯುವ ಅಕ್ರಮ ಅಥವಾ ಸರ್ಕಾರಿ ನೌಕರರ ಅಕ್ರಮಗಳ ಬಗ್ಗೆ ರಹಸ್ಯವಾಗಿ ದೂರು ನೀಡಲು ಕೇಂದ್ರ ವಿಚಕ್ಷಣಾ ದಳ (Central Vigilance Commission) ಹೊಸ ವಿಧಾನವೊಂದನ್ನು ಜಾರಿಗೆ ತಂದಿದೆ. ದೂರುದಾರರ ಹೆಸರು ಬಹಿರಂಗಪಡಿಸದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಬಹಿರಂಗಪಡಿಸುವಿಕೆ ಹಾಗೂ ಮಾಹಿತದಾರನ ರಕ್ಷಣೆ ಅಥವಾ ಪಿಡಿಪಿಐ (PIDPI / Public Interest Disclosure and Protection of Informer) ಅಡಿಯಲ್ಲಿ ದೂರು ನೀಡಲು ಅವಕಾಶ ಕಲ್ಪಿಸಿದೆ.
ಯಾವುದೇ ಭ್ರಷ್ಟಾಚಾರ ಎದುರಿಸಿದರೆ ಅಥವಾ ಗಮನಕ್ಕೆ ಬಂದರೆ ನೀವು ಅದರ ಬಗ್ಗೆ ಸುಲಭವಾಗಿ ಮತ್ತು ನೇರವಾಗಿ ಪಿಡಿಪಿಐ ಅಡಿಯಲ್ಲಿ ಕೇಂದ್ರ ಜಾಗೃತ ಆಯೋಗದ ಕಾರ್ಯದರ್ಶಿಗೆ ತಿಳಿಸಬಹುದಾಗಿದೆ.
ಪಿಡಿಪಿಐ ಅಡಿಯಲ್ಲಿ ದೂರು ಸಲ್ಲಿಸುವುದರ ಪ್ರಯೋಜನವೆಂದರೆ, ದೂರುದಾರರ ಗುರುತನ್ನು ರಹಸ್ಯವಾಗಿಡಲಾಗುತ್ತದೆ. ದೂರುದಾರರು ಏನೇನು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ವಿವರ ಇಲ್ಲಿದೆ;
ಕೇಂದ್ರ ಸರ್ಕಾರದ ಅಥವಾ ಕೇಂದ್ರ ಕಾಯ್ದೆಯಡಿ ಸ್ಥಾಪಿಸಲಾದ ಯಾವುದೇ ನಿಗಮದ ನೌಕರರಿಗೆ ಸಂಬಂಧಿಸಿದ ದೂರುಗಳು, ಸರ್ಕಾರಿ ಕಂಪನಿಗಳು, ಸೊಸೈಟಿಗಳು ಅಥವಾ ಕೇಂದ್ರ ಸರ್ಕಾರದ ಒಡೆತನದ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸ್ಥಳೀಯ ಪ್ರಾಧಿಕಾರಗಳು ಆಯೋಗದ ವ್ಯಾಪ್ತಿಗೆ ಬರುತ್ತವೆ. ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಸರ್ಕಾರಗಳು ಅಥವಾ ಅದರ ನಿಗಮಗಳ ಚಟುವಟಿಕೆಗಳಿಂದ ನೇಮಕಗೊಂಡ ಸಿಬ್ಬಂದಿಗಳು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ.
ದೂರುಗಳನ್ನು ಅಂಚೆ ಮೂಲಕ ಮಾತ್ರ ಕಳುಹಿಸಬೇಕು. ಇಮೇಲ್‌ಗಳು, ದೂರು ನಿರ್ವಹಣೆ ಪೋರ್ಟಲ್ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸ್ವೀಕರಿಸಿದ ದೂರುಗಳನ್ನು ಪರಿಗಣಿಸಲಾಗುವುದಿಲ್ಲ. ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದೇ ಇರುವ ಸಲುವಾಗಿ, ಆಯೋಗವು ಯಾವುದೇ ಸ್ವೀಕೃತಿಯನ್ನು ನೀಡುವುದಿಲ್ಲ ಮತ್ತು ವಿಷಲ್-ಬ್ಲೋವರ್‌ಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ಆಯೋಗದೊಂದಿಗೆ ಯಾವುದೇ ಹೆಚ್ಚಿನ ಪತ್ರವ್ಯವಹಾರ ನಡೆಸದಂತೆ ಸೂಚಿಸಲಾಗಿದೆ.
ಮತ್ತಷ್ಟು ಓದಿ: ಜಿ20 ಶೃಂಗಸಭೆ: ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮದಲ್ಲಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ
ಪಿಡಿಪಿಐ ದೂರುಗಳು ದೂರುದಾರರನ್ನು ಗುರುತಿಸುವ ವಿವರಗಳನ್ನು ಒಳಗೊಂಡಿರಬಾರದು. ಅಂತಹ ವಿವರಗಳನ್ನು ಸೇರಿಸುವುದು ಅನಿವಾರ್ಯವಾಗಿದ್ದರೆ, ಸಿವಿಸಿ ಪೋರ್ಟಲ್‌ನಲ್ಲಿ ಸಾಮಾನ್ಯ ದೂರನ್ನು ದಾಖಲಿಸಬಹುದು ಎಂದು ವಿಚಕ್ಷಣಾ ದಳದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ