Axiom-4 Mission: ಬಾಹ್ಯಾಕಾಶಯಾನ ಮುಗಿಸಿ ಭೂಮಿಯತ್ತ ಹೊರಟ ಶುಭಾಂಶು ಶುಕ್ಲಾ
ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಆಕ್ಸಿಯಮ್-4 ಮಿಷನ್ನಡಿ ಬಾಹ್ಯಾಕಾಶಕ್ಕೆ ಹಾರಿದ್ದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ತಮ್ಮ ಪ್ರಯೋಗಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ನಾಲ್ವರು ಇದೀಗ ವಾಪಾಸ್ ಭೂಮಿಗೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣವಾಗಲಿದೆ.

ನವದೆಹಲಿ, ಜುಲೈ 14: ಆಕ್ಸಿಯಮ್-4 (Axiom-4) ಅಡಿಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ(Shubhanshu Shukla) ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭಾರತಕ್ಕೆ ವಾಪಾಸಾಗುತ್ತಿದ್ದಾರೆ. ಡ್ರ್ಯಾಗನ್ ನೌಕೆ ಮೂಲಕ ಭೂಮಿಯತ್ತ ಆಗಮಿಸುತ್ತಿರುವ ನಾಲ್ವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಐಎಸ್ಎಸ್ನಿಂದ ಯಶಸ್ವಿಯಾಗಿ ಹೊರಟಿರುವ ಡ್ರ್ಯಾಗನ್ ನೌಕೆ ನಾಳೆ (ಮಂಗಳವಾರ) ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ) ಭೂಮಿ ತಲುಪಲಿದೆ. ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೋಲೆಂಡ್‌ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನೀವ್ಸ್ಕಿ , ಹಂಗೇರಿಯದ ಗಗನಯಾನಿ ಟಿಬೋರ್ ಕಾಪು ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಬಾಹ್ಯಾಕಾಶಯಾನ ಮುಗಿಸಿ ಭೂಮಿಯತ್ತ ಪ್ರಯಾಣ ಮಾಡಿರುವ ಈ ಗಗನಯಾತ್ರಿಗಳನ್ನು ಹೊತ್ತು ಕರೆತರುತ್ತಿರುವ ಡ್ರ್ಯಾಗನ್ ನೌಕೆ ನಾಳೆ ಮಧ್ಯಾಹ್ನ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಇಳಿಯಲಿದೆ. “ಈ ಸಮಯ ಸರಿಸುಮಾರು 1 ಗಂಟೆಯ ಅಂತರವನ್ನು ಹೊಂದಿವೆ” ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶ ರೈತನಾದ ಶುಭಾಂಶು ಶುಕ್ಲಾ; ಐಎಸ್‌ಎಸ್‌ನಲ್ಲಿ ಮೆಂತ್ಯ, ಹೆಸರುಕಾಳು ಗಿಡ ಬೆಳೆದ ಭಾರತದ ಗಗನಯಾತ್ರಿ
ಭೂಮಿಗೆ ವಾಪಾಸ್ ಹೊರಡುವ ಮುನ್ನ ಶುಭಾಂಶು ಶುಕ್ಲಾ ನೀಡಿರುವ ಸಂದೇಶದಲ್ಲಿ “41 ವರ್ಷಗಳ ಹಿಂದೆ ಭಾರತೀಯರೊಬ್ಬರು ಬಾಹ್ಯಾಕಾಶಕ್ಕೆ ಬಂದರು. ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಅವರು ನಮಗೆ ಹೇಳಿದರು. ಇಂದಿನ ಭಾರತವು ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯಂತೆ ಕಾಣುತ್ತಿದೆ, ಇಂದಿನ ಭಾರತವು ನಿರ್ಭೀತವಾಗಿ ಕಾಣುತ್ತಿದೆ, ಇಂದಿನ ಭಾರತವು ಆತ್ಮವಿಶ್ವಾಸದಿಂದ ಕಾಣುತ್ತಿದೆ, ಇಂದಿನ ಭಾರತವು ಹೆಮ್ಮೆಯಿಂದ ತುಂಬಿದೆ. ಇಂದಿನ ಭಾರತವು ಇನ್ನೂ ‘ಸಾರೆ ಜಹಾಂ ಸೆ ಅಚ್ಚಾ’ ಎಂದು ಕಾಣುತ್ತದೆ” ಎಂದು ಐಎಸ್‌ಎಸ್‌ನಲ್ಲಿ ಮಾಡಿದ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ. ಆಕ್ಸಿಯಮ್ -4 ಸಿಬ್ಬಂದಿ ಭೂಮಿಗೆ ಹಿಂದಿರುಗುವ ಪ್ರಯಾಣಕ್ಕೂ ಮುನ್ನ ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಿದರು. “ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ಮುಂದಿನ ಪ್ರಯಾಣ ದೀರ್ಘ ಮತ್ತು ಕಷ್ಟಕರವಾಗಿರಬಹುದು, ಆದರೆ ಅದು ಪ್ರಾರಂಭವಾಗಿದೆ ಎಂಬುದಂತೂ ನಿಜ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Axiom-4 Mission: ಜುಲೈ 14ರಂದು ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ ಅವರು ನಡೆಸಿದ ಪ್ರಮುಖ ಪ್ರಯೋಗಗಳಲ್ಲಿ ಒಂದಾದ ಬಾಹ್ಯಾಕಾಶ ಸೂಕ್ಷ್ಮ ಪಾಚಿಗಳ ಅಧ್ಯಯನವು ಆಹಾರ, ಆಮ್ಲಜನಕ ಮತ್ತು ಜೈವಿಕ ಇಂಧನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿದೆ. ಅವುಗಳ ಸ್ಥಿತಿಸ್ಥಾಪಕತ್ವ ಮತ್ತು ಬಹುಮುಖತೆಯು ಬಾಹ್ಯಾಕಾಶಕ್ಕೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ಮಾನವ ಜೀವನವನ್ನು ಬೆಂಬಲಿಸುವಲ್ಲಿ ಉಪಯುಕ್ತವಾಗಬಹುದು.
ನಾಸಾದ ಹೇಳಿಕೆಯ ಪ್ರಕಾರ, ಗಗನಯಾನಿಗಳಿರುವ ಡ್ರ್ಯಾಗನ್ ನೌಕೆ 580 ಪೌಂಡ್‌ಗಳಿಗೂ ಹೆಚ್ಚು ಸರಕುಗಳನ್ನು ಮರಳಿ ತರಲಿದೆ. ಇದರಲ್ಲಿ ನಾಸಾ ಹಾರ್ಡ್‌ವೇರ್ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ನಡೆಸಿದ 60ಕ್ಕೂ ಹೆಚ್ಚು ಪ್ರಯೋಗಗಳಿಂದ ಸಂಗ್ರಹಿಸಲಾದ ಅಮೂಲ್ಯವಾದ ಡೇಟಾಗಳು ಕೂಡ ಸೇರಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




