ಘಾಜಿಪುರ್: ಅಂಬಿಗನೊಬ್ಬನಿಗೆ ಗಂಗಾನದಿ ಹೆಣ್ಣುಮಗುವನ್ನು ಉಡುಗೊರೆಯನ್ನಾಗಿ ನೀಡಿದೆ.. ! ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಘಾಜಿಪುರ್ನಲ್ಲಿ ನಡೆದಿದೆ. ನದಿ ಉಡುಗೋರೆ ಕೊಡುವುದಾ? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಉದ್ಭವ ಆಗಿರಬಹುದು. ನಿಜ ಹೇಳಬೇಕೆಂದರೆ ಗಂಗಾನದಿ ಉಡುಗೊರೆ ಕೊಟ್ಟಿದ್ದಲ್ಲ, ಹೀಗೆ ನದಿಯಲ್ಲಿ ತೇಲಿಬಂದ ಮಗುವನ್ನು ತನಗೆ ಸಿಕ್ಕ ಗಿಫ್ಟ್ ಎಂದು ಭಾವಿಸಿ ಅಂಬಿಗ ಸಾಕಲು ಮುಂದಾಗಿದ್ದಾರೆ. ಈ ಅಂಬಿಗನನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರವರು ಶ್ಲಾಘಿಸಿದ್ದಾರೆ.
ಘಾಜಿಪುರದ ದಾದ್ರಿಘಾಟ್ನಲ್ಲಿ ಗಂಗಾನದಿಯಲ್ಲಿ ಮರದ ಪೆಟ್ಟಿಗೆಯೊಂದು ತೇಲಿಬಂತು. ಅದು ಸ್ಥಳೀಯ ಅಂಬಿಗನ ಕೈಗೆ ಸಿಕ್ಕಿದೆ. ಕುತೂಹಲದಿಂದ ಪೆಟ್ಟಿಗೆ ತೆರೆದು ನೋಡಿದಾಗ ಅದರಲ್ಲಿ ನವಜಾತ ಹೆಣ್ಣು ಶಿಶು ಕಾಣಿಸಿದೆ. ಯಾರು ಹೆತ್ತ ಮಗುವೋ..ಅದನ್ಯಾಕೆ ಹೀಗೆ ನದಿಯಲ್ಲಿ ತೇಲಿಬಿಟ್ಟಿದ್ದಾರೋ ಗೊತ್ತಿಲ್ಲ, ಈ ಅಂಬಿಗನಂತೂ ತುಂಬ ಖುಷಿಯಿಂದ ಮನೆಗೆ ಕರೆದುಕೊಂಡು ಬಂದಿದ್ದಾರೆ. ನದಿಯ ಪ್ರಸಾದ ಎನ್ನುತ್ತಿದ್ದಾರೆ.
ಅಂಬಿಗನ ಹೆಸರು ಗುಲ್ಲು ಚೌಧರಿ. ಇವರಿಗೆ ಸಿಕ್ಕ ಪೆಟ್ಟಿಗೆಯ ಮೇಲೆಲ್ಲ ಹಲವು ದೇವ-ದೇವತೆಗಳ ಚಿತ್ರಗಳಿದ್ದವು. ಮಗುವಿನೊಟ್ಟಿಗೆ ಅದರ ಜಾತಕವನ್ನೂ ಇಡಲಾಗಿತ್ತು. ಮಗು ಸಿಕ್ಕ ಬಗ್ಗೆ ಪೊಲೀಸರಿಗೂ ಸುದ್ದಿ ತಲುಪಿಸಲಾಗಿದ್ದು, ಸದ್ಯಕ್ಕಂತೂ ಅದನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಂದೆಡೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೆ, ಇನ್ನೊಂದೆಡೆ ಅದರ ತಂದೆತಾಯಿಯನ್ನು ಹುಡುಕುವ ಕೆಲಸವೂ ಆಗುತ್ತಿದೆ. ಸದ್ಯಕ್ಕಂತೂ ಗುಲ್ಲು ಮಗುವಿನ ಹೊಣೆ ತನ್ನದೇ ಎನ್ನುತ್ತಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಯೋಗಿ ಆದಿತ್ಯನಾಥ್ ಅವರು ಅಂಬಿಗನನ್ನು ತುಂಬ ಹೊಗಳಿದ್ದಾರೆ. ಮಗುವನ್ನು ಬೆಳೆಸಲು ಅಗತ್ಯವಿರುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿತರಲ್ಲಿ ಕಡಿಮೆಯಾದ ಬ್ಲ್ಯಾಕ್ ಫಂಗಸ್, ಕೊವಿಡ್‌ನಿಂದ ಗುಣಮುಖರಾದವರಲ್ಲಿ ಹೆಚ್ಚಳ
Newborn Girl In Wooden Box Found In Ganga River in Uttar Pradesh
Published On - 1:00 pm, Thu, 17 June 21