ಖೆಜುರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (NIA) ಪಶ್ಚಿಮ ಬಂಗಾಳದ (West Bengal) ವಿವಿಧೆಡೆ ರೇಡ್ ಮಾಡಿದೆ. ಪೂರ್ವ ಮೇದಿನಿಪುರ ಜಿಲ್ಲೆಯ ಒಟ್ಟು ಐದು ಪ್ರದೇಶಗಳಲ್ಲಿ ಎನ್ಐಎ ಹುಡುಕಾಟ ನಡೆಸಿದೆ. ಈ ವೇಳೆ ಹಲವು ದೋಷಯುಕ್ತ ದಾಖಲೆಗಳು, ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.
2022 ಜನವರಿ 3ರಂದು ಖೆಜುರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಶ್ಚಿಮ ಭಂಗನಮರಿ ಗ್ರಾಮದ ಕಂಕಣ್ ಕರಣ್ ಎಂಬಾತನ ಮನೆಯಲ್ಲಿ ಬಾಂಬ್ ಸ್ಫೋಟವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಹಾಗೂ ಮೂವರಿಗೆ ಗಾಯವಾಗಿತ್ತು. ಅಂದರೆ ಇವರೆಲ್ಲ ಮನೆಯಲ್ಲೇ ಬಾಂಬ್ ತಯಾರು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಖೆಜುರಿ ಠಾಣೆಯಲ್ಲಿ ಜನವರಿ 4ರಂದು ಕೇಸ್ ದಾಖಲಾಗಿ, ಜನವರಿ 25ರಂದು ಎನ್ಐಎ ತನಿಖೆ ಕೈಗೆತ್ತಿಕೊಂಡಿತ್ತು.
ಅಂದಹಾಗೇ ಬಾಂಬ್ ಬ್ಲಾಸ್ಟ್ನಲ್ಲಿ ಮೃತಪಟ್ಟವರಲ್ಲಿ ಒಬ್ಬಾತ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೂ ಸೇರಿದ್ದಾಗಿ ವರದಿಯಾಗಿದೆ. ತನಿಖೆಯನ್ನು ತಾವು ಕೈಗೆತ್ತಿಕೊಂಡಿದ್ದನ್ನು ಸ್ಪಷ್ಟಪಡಿಸಿದ್ದ ಎನ್ಐಎ ಅಧಿಕಾರಿಯೊಬ್ಬರು, ಖೆಜುರಿ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ನಾವು ನಡೆಸಲಿದ್ದೇವೆ. ರಾಜ್ಯ ಪೊಲೀಸರು ಈ ಕೇಸ್ನ್ನು ನಮಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿಸಿದ್ದರು. ಇನ್ನು ಘಟನೆ ನಡೆದ ಬೆನ್ನಲ್ಲೇ ಟಿಎಂಸಿ ಇದನ್ನು ಬಿಜೆಪಿ ತಲೆಗೆ ಕಟ್ಟಿದೆ. ಬಾಂಬ್ ಬ್ಲಾಸ್ ಹಿಂದೆ ಬಿಜೆಪಿ ಗೂಂಡಾಗಳು ಇದ್ದಾರೆ ಎಂದು ಆರೋಪ ಮಾಡಿದೆ. ಅಷ್ಟೇ ಅಲ್ಲ, ಘಟನೆ ಬೆನ್ನಲ್ಲೇ ಖೆಜುರಿಯಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಗಲಾಟೆಯೂ ನಡೆದಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಉಕ್ರೇನ್ ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ 80 ವರ್ಷದ ವೃದ್ಧ: ಫೋಟೋ ವೈರಲ್
Published On - 9:51 am, Sat, 26 February 22