ರಾಜಸ್ಥಾನ ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​ ಶಾಸಕ; ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲವೆಂದು ಆರೋಪ

ಈ ಬಾರಿ ಮಂಡನೆಯಾಗಿರುವ ಬಜೆಟ್​​ನ್ನು ನಾನು ಅಧ್ಯಯನ ಮಾಡಿದೆ. ನನ್ನ ಏರಿಯಾ ಹೊರತು ಪಡಿಸಿ ಉಳಿದಕಡೆಗಳಲ್ಲಿ ಎಲ್ಲ ಹೊಸ ರಸ್ತೆ ನಿರ್ಮಾಣ ಘೋಷಿಸಲಾಗಿದೆ. ಮೊದಲೆಲ್ಲ ಈ ಬಗ್ಗೆ ಜನರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಜನರಿಗೂ ಅರ್ಥವಾಗುತ್ತದೆ ಎಂದು ಅಮೀನ್ ಖಾನ್​ ತಿಳಿಸಿದ್ದಾರೆ.

ರಾಜಸ್ಥಾನ ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​ ಶಾಸಕ; ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲವೆಂದು ಆರೋಪ
ಅಶೋಕ್​ ಗೆಹ್ಲೋಟ್​
Follow us
TV9 Web
| Updated By: Lakshmi Hegde

Updated on:Feb 26, 2022 | 9:28 AM

ಜೈಪುರ: ರಾಜಸ್ಥಾನ ಕಾಂಗ್ರೆಸ್​ ಸರ್ಕಾರ (Rajasthan Government) ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕಾಂಗ್ರೆಸ್​ ಶಾಸಕರೊಬ್ಬರು ಆರೋಪ ಮಾಡಿದ್ದು, ಸಿಎಂ ಅಶೋಕ್ ಗೆಹ್ಲೋಟ್​​ರಿಗೆ (CM Ashok Gehlot) ತೀವ್ರ ಮುಜುಗರ ತಂದಿದೆ. ಬಜೆಟ್​ ಅಧಿವೇಶನದ (Budget Session) ವೇಳೆ ಮಾತನಾಡಿದ ರಾಜಸ್ಥಾನ ಕಾಂಗ್ರೆಸ್ ಶಾಸಕ ಅಮೀನ್ ಖಾನ್​, ರಾಜ್ಯದಲ್ಲಿ ಶೇ.95ರಷ್ಟು ಮುಸ್ಲಿಮರು ಮತದಾನ ಮಾಡುತ್ತಾರೆ ಮತ್ತು ಅದರಲ್ಲಿ ಶೇ.99ರಷ್ಟು ಜನರು ಕಾಂಗ್ರೆಸ್​ಗೇ ಮತ ಹಾಕುತ್ತಾರೆ. ಆದರೆ ರಾಜ್ಯದಲ್ಲಿ ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್​ ತನ್ನ ಹಳೇ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಇಲ್ಲದೆ ಹೋದರೆ ಕಷ್ಟಪಡಬೇಕಾಗುತ್ತದೆ ಎಂದೂ ಹೇಳಿದ್ದಾರೆ. ಇನ್ನು ತನ್ನ ಕ್ಷೇತ್ರಕ್ಕೆ ಹೊಸ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡದೆ ಇರುವುದಕ್ಕೆ ಮುಖ್ಯಮಂತ್ರಿ ಗೆಹ್ಲೋಟ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಮಂಡನೆಯಾಗಿರುವ ಬಜೆಟ್​​ನ್ನು ನಾನು ಅಧ್ಯಯನ ಮಾಡಿದೆ. ನನ್ನ ಏರಿಯಾ ಹೊರತು ಪಡಿಸಿ ಉಳಿದಕಡೆಗಳಲ್ಲಿ ಎಲ್ಲ ಹೊಸ ರಸ್ತೆ ನಿರ್ಮಾಣ ಘೋಷಿಸಲಾಗಿದೆ. ಮೊದಲೆಲ್ಲ ಈ ಬಗ್ಗೆ ಜನರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಜನರಿಗೂ ಅರ್ಥವಾಗುತ್ತದೆ ಎಂದು ಹೇಳಿರುವ ಅಮೀನ್​ ಖಾನ್​, ನಾನು ನನ್ನ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗಾಗಿ ಎರಡು ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿ ಗೆಹ್ಲೋಟ್​​ರ ಬಳಿ ಮನವಿ ಮಾಡಿದ್ದೆ. ಆದರೆ ಎರಡು ಬಿಡಿ, ಒಂದು ಶಾಲೆ ನಿರ್ಮಾಣಕ್ಕೂ ಅವರು ಅನುಮೋದನೆ ನೀಡಿಲ್ಲ. ರಾಜಸ್ಥಾನ ಸರ್ಕಾರದಲ್ಲಿ ಇಬ್ಬರು ಮುಸ್ಲಿಂ ಸಚಿವರು ಇದ್ದಾರೆ. ಅವರಿಬ್ಬರಿಗೂ ಒಳ್ಳೆಯ ಖಾತೆ ಸಿಗಲಿಲ್ಲ ಎಂದೂ ಆರೋಪ ಮಾಡಿದ್ದಾರೆ.

ಫೆ.23ರಂದು ರಾಜಸ್ಥಾನ ಕಾಂಗ್ರೆಸ್​ ಸರ್ಕಾರ ಬಜೆಟ್​ ಮಂಡನೆ ಮಾಡಿದೆ. ಬಜೆಟ್ ಮಂಡನೆ ಬಳಿಕ 200 ಶಾಸಕರಿಗೆ ಐಫೋನ್​ ನೀಡಲಾಗಿತ್ತು. ಆದರೆ ಬಿಜೆಪಿ ಶಾಸಕರು ಆ ಐಫೋನ್​​ನ್ನು ವಾಪಸ್​ ನೀಡಿದ್ದಾರೆ. ಇದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ನಮಗೆ ಐಫೋನ್​ ಬೇಡ ಎಂದು ಹೇಳಿದ್ದರು. ಬಿಜೆಪಿ ಶಾಸಕರು ಐಫೋನ್​ ಹಿಂದಿರುಗಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಸರ್ಕಾರದ ಉಪ ಮುಖ್ಯ ಸಚೇತಕ ಮಹೇಂದ್ರ ಚೌಧರಿ ಮಾತನಾಡಿ, ಈಗ ಐಫೋನ್​ ಹಿಂದಿರುಗಿಸುತ್ತಿರುವ ಬಿಜೆಪಿ ಶಾಸಕರು ಹಿಂದೆ ನಮ್ಮ ಸರ್ಕಾರದಿಂದ ಪಡೆದ ಫ್ಲ್ಯಾಟ್​ ಮತ್ತು ಐಪ್ಯಾಡ್​ಗಳನ್ನೂ ಹಿಂದಿರುಗಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಏಣಿಕೆ; ಎರಡು ತಿಂಗಳಲ್ಲಿ 2 ಕೋಟಿ ರೂ. ಹಣ ಸಂಗ್ರಹ

Published On - 9:17 am, Sat, 26 February 22