ಕೊಚ್ಚಿ: ಚಿನ್ನ ಕಳ್ಳಸಾಗಾಣಿಕೆ ಆರೋಪದಲ್ಲಿ ಸಿಲುಕಿರುವ ಸ್ವಪ್ನಾ ಸುರೇಶ್ ಹಾಗೂ ಇತರ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಇಂದು (ಮಾರ್ಚ್ 22) ತಿರಸ್ಕರಿಸಿದೆ. ಪ್ರಕರಣದ ಕುರಿತಾದ ತನಿಖೆ ಕೊನೆಯಾಗಿದೆ ಹಾಗೂ ಆರೋಪಿಗಳು ದೀರ್ಘಕಾಲದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂಬ ಕಾರಣಕ್ಕೆ ಜಾಮೀನು ಕೋರಿ ಆರೋಪಿಗಳು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಜೊತೆಗೆ, ಆರೋಪಿಗಳ ವಿರುದ್ಧದ ಇರುವ ಆಪಾದನೆಗಳು ಕಾನೂನಿನ ಎದುರು ಸ್ಥಿರವಾಗಿಲ್ಲ ಎಂದೂ ಅವರು ಹೇಳಿದ್ದರು.
ಈ ಹಿಂದೆ ಪ್ರಕರಣದ ಕೆಲವು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು. ಆ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಈ ವಿವರಗಳನ್ನು ಸ್ವಪ್ನಾ ಸುರೇಶ್ ಹಾಗೂ ಇತರ ಆರು ಆರೋಪಿಗಳು ತಮ್ಮ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಉಳಿದ ಕೆಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್, ಚಿನ್ನ ಕಳ್ಳಸಾಗಾಣಿಕೆಯು ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ (UAPA)ಯ ಅಡಿಯಲ್ಲಿ ಬರುವುದಿಲ್ಲ. ಬದಲಾಗಿ ದೇಶದ ಆರ್ಥಿಕ ಅಥವಾ ಹಣಕಾಸು ಸ್ಥಿರತೆಗೆ ಸಮಸ್ಯೆ ಉಂಟಾದ ಬಗ್ಗೆ ಸಾಕ್ಷಿ ಬೇಕು ಎಂದು ತಿಳಿಸಿತ್ತು. ಹೈಕೋರ್ಟ್ನ ಈ ತೀರ್ಪು ಉಲ್ಲೇಖಿಸಿದ್ದ ಆರೋಪಿಗಳು ತಮ್ಮ ವಿರುದ್ಧದ ಆಪಾದನೆಗಳು ಸ್ಥಿರವಾಗಿಲ್ಲ ಎಂದು ಹೇಳಿದ್ದರು.
ಸದ್ಯ, ₹ 14.82 ಕೋಟಿ ಬೆಲೆಬಾಳುವ 30 ಕೆಜಿ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ವಪ್ನಾ ಸುರೇಶ್ ಕೇರಳದಲ್ಲಿನ ಯುಎಇ ರಾಯಭಾರ ಕಚೇರಿಯ ಮಾಜಿ ಉದ್ಯೋಗಿಯಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಹಂಚಿಕೆಯಾಗಿದ್ದ ಸ್ವಪ್ನಾ ಸುರೇಶ್ಗೆ ಸಂಬಂಧಿಸಿದ್ದು ಎನ್ನಲಾಗಿರುವ ಧ್ವನಿ ತುಣುಕಿನಲ್ಲಿ, ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಇತರ ಕೆಲವು ಸಚಿವರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಅಷ್ಟೇ ಅಲ್ಲದೆ, ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ ಸ್ವಪ್ನಾ ಸುರೇಶ್ ಜೊತೆಗಿದ್ದ ಇಬ್ಬರು ಮಹಿಳಾ ಪೊಲೀಸರು ಕೂಡ, ವಿಜಯನ್ ಹೆಸರು ಹೇಳುವಂತೆ ಸ್ವಪ್ನಾರನ್ನು ಒತ್ತಾಯಿಸಿದ್ದನ್ನು ಕೇಳಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಜಾರಿ ನಿರ್ದೇಶನಾಲಯ ಜೊತೆಗೆ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಕಸ್ಟಮ್ಸ್ ಅಧಿಕಾರಿಗಳು ಕೂಡ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಕೇಂದ್ರದ ಏಜೆನ್ಸಿಗಳು ತಮ್ಮ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಹೀಗೆ ಮಾಡುತ್ತಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದರು.
ಇದನ್ನೂ ಓದಿ: ಪಿಣರಾಯಿ ವಿಜಯನ್ ಹೆಸರು ಹೇಳಲು ಸ್ವಪ್ನಾ ಸುರೇಶ್ರನ್ನು ಒತ್ತಾಯಿಸಲಾಗಿದೆ: ED ವಿರುದ್ಧ ಪ್ರಕರಣ ದಾಖಲಿಸಿದ ಕೇರಳ ಪೊಲೀಸ್
ಇದನ್ನೂ ಓದಿ: ಕೇರಳ Gold Smuggling: ನೇರವಾಗಿ ಫೀಲ್ಡ್ ಗೆ ಇಳಿದ NIA
Published On - 3:23 pm, Mon, 22 March 21