ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನಾ ಚಟುವಟಿಕೆ; ಆರು ರಾಜ್ಯಗಳಲ್ಲಿ ಎನ್ಐಎ ದಾಳಿ
ಹರಿಯಾಣ, ಪಂಜಾಬ್ ಸೇರಿದಂತೆ ಆರು ರಾಜ್ಯಗಳ 122 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ಪಾಕಿಸ್ತಾನ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕ ಗುಂಪುಗಳ ಜತೆ ನಂಟು ಹೊಂದಿರುವವರ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ: ಹರಿಯಾಣ, ಪಂಜಾಬ್ ಸೇರಿದಂತೆ ಆರು ರಾಜ್ಯಗಳ 122 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ಪಾಕಿಸ್ತಾನ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕ ಗುಂಪುಗಳ ಜತೆ ನಂಟು ಹೊಂದಿರುವವರ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದ ಕೆಲವು ಶಂಕಿತ ಮನೆಗಳ ಮೇಲೆ ಎನ್‌ಐಎ ತಂಡಗಳು ದಾಳಿ ನಡೆಸಿವೆ. ಎನ್‌ಐಎ ಅಧಿಕಾರಿಗಳ ತಂಡಗಳು ಮುಂಜಾನೆಯೇ ದಾಳಿ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.
ಎನ್‌ಐಎ ದಾಖಲಿಸಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಧ ಕಾರ್ಯ ನಡೆಯುತ್ತಿದೆ. ಪಂಜಾಬ್, ಹರಿಯಾಣ, ದೆಹಲಿ , ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಅಪರಾಧ ಚಟುವಟಿಕೆಗಳ ತಾಣಗಳು ಮತ್ತು ಜಾಲಗಳು, ದರೋಡೆಕೋರರು ಮತ್ತು ಅವರ ನಿಕಟವರ್ತಿಗಳು ಹಾಗೂ ಸಹಚರರ ದಮನದ ಭಾಗವಾಗಿ ದಾಳಿಗಳು ಮತ್ತು ಶೋಧಕಾರ್ಯ ನಡೆದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕ ಜಾಲಗಳನ್ನು, ಅವುಗಳ ಹಣಕಾಸು ಬೆಂಬಲ ಮತ್ತು ಮೂಲಸೌಕರ್ಯಗಳನ್ನು ಕಿತ್ತುಹಾಕುವ ಪ್ರಯತ್ನ ಮುಂದುವರಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Adani: ಆರಲ್ಲ, ಮೂರು ತಿಂಗಳು ಮಾತ್ರ ಟೈಮ್; ಅದಾನಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೆಬಿಗೆ ಆಗಸ್ಟ್ 14 ಗಡುವು
ಫೆಬ್ರವರಿಯಲ್ಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢದಲ್ಲಿ ಶಂಕಿತರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ಸಂಸ್ಥೆಯು ಈಗಾಗಲೇ ಮೂರು ಪ್ರಕರಣಗಳ ಪೈಕಿ ಎರಡು ಆರೋಪಪಟ್ಟಿ ಸಲ್ಲಿಸಿದೆ.
ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಹಲವಾರು ಕ್ರಿಮಿನಲ್ ಗ್ಯಾಂಗ್‌ಗಳು ಈಗ ದುಬೈನಿಂದ ನಿಯಂತ್ರಿಸಲ್ಪಡುತ್ತಿವೆ. 90 ರ ದಶಕದ ಮಾದರಿಯಲ್ಲಿ ಭೂಗತ ಜಗತ್ತು ಕೃತ್ಯಗಳನ್ನು ಎಸಗಿದ್ದ ರೀತಿಯಲ್ಲೇ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಖಲಿಸ್ತಾನ್ ಪರ ಸಂಘಟನೆಗಳು ತಮ್ಮ ಇಲ್ಲಿನ ನೆಟ್‌ವರ್ಕ್‌ಗಳನ್ನು ಬಳಸುತ್ತಿವೆ. ವಿದೇಶಗಳಲ್ಲಿ ನೆಲೆಸಿರುವ ಅರ್ಶ್ ದಲಾ ಮತ್ತು ಗೌರವ್ ಪಟಿಯಾಲ್‌ರಂತಹವರು ಉದ್ದೇಶಿತ ಹತ್ಯೆಗಳು, ಸುಲಿಗೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಭಾರತೀಯ ಜೈಲುಗಳು ಮತ್ತು ಇತರ ದೇಶಗಳಲ್ಲಿ ಇರುವ ಖಲಿಸ್ತಾನ್ ಪರ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎನ್ಐಎ ಆರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ